ಪಿಒಕೆ ಭಾರತದ ಭಾಗ ಎಂದು ಬಿತ್ತರಿಸಿದ ಪಾಕಿಸ್ತಾನದ ಪತ್ರಕರ್ತರು ವಜಾ
ಇಸ್ಲಾಮಾಬಾದ್, ಜೂನ್ 13: ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದ ಭಾಗ ಎಂದು ತೋರಿಸಿದ್ದ ಪಾಕಿಸ್ತಾನದ ಪಿ ಟಿವಿ ಪತ್ರಕರ್ತರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಪಿ ಟಿವಿ ಪತ್ರಕರ್ತರು ಪಾಕಿಸ್ತಾನದ ಭೂಪಟವನ್ನು ತಪ್ಪಾಗಿ ತೋರಿಸಿ ಕಾಶ್ಮೀರವನ್ನು ಭಾರತದ ಭಾಗವಾಗಿ ಗುರುತಿಸಿರುವ ಭೂಪಟವನ್ನು ಬಿತ್ತರಿಸಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪಾಕ್ ನ ಸಂಸತ್ ನಲ್ಲಿ ತೀವ್ರ ಒತ್ತಡ ವ್ಯಕ್ತವಾಗಿತ್ತು. ಪಾಕಿಸ್ತಾನ ಮಾಹಿತಿ ಮತ್ತು ಪ್ರಸಾರ ವಿಭಾಗದ ಸ್ಥಾಯಿ ಸಮಿತಿಗೆ ಕೂಡ ಈ ವಿವಾದವನ್ನು ರವಾನಿಸಲಾಗಿತ್ತು. ಇದೀಗ ಸಂಸತ್ ನ ಒತ್ತಡಕ್ಕೆ ಮಣಿದಿರುವ ಪಿ.ಟಿವಿಯ ಇಬ್ಬರು ಪತ್ರಕರ್ತರ ವಿರುದ್ಧ ಕ್ರಮ ಕೈಗೊಂಡಿದ್ದು ಅವರನ್ನು ವಜಾಗೊಳಿಸಿದೆ. ಇದಕ್ಕೆ ಸಂಬಂಧಿಸಿದಂತೆ ಪಿ. ಟಿವಿ ಸ್ಪಷ್ಟನೆ ನೀಡಿದ್ದು, ಬೇಜವಾಬ್ದಾರಿತನವನ್ನು ತಾನು ಸಹಿಸುವುದಿಲ್ಲ ಎಂದು ಹೇಳಿಕೊಂಡಿದೆ. ಅಲ್ಲದೇ ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿಯೂ ಹೇಳಿಕೊಂಡಿದೆ.
ಈ ಮೊದಲು ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದ ಭಾಗವೆಂದು ಪಿಟಿವಿ ಪತ್ರಕರ್ತರು ವಿವರಿಸಿದ್ದು, ವೆಬ್‍ಸೈಟ್ ಗ್ರಾಫಿಕ್ಸ್ ಮೂಲಕ ಕೊರೊನಾದ ವ್ಯಾಪ್ತಿಯನ್ನು ವಿವರಿಸಿದ್ದರು. ಈ ನಕ್ಷೆಯ ಫೋಟೋ ನೋಡಿದ ಕೂಡಲೇ ನೆಟ್ಟಿಗರು ಟ್ವಿಟರ್ ನಲ್ಲಿ ಪಾಕಿಸ್ತಾನ ಸರ್ಕಾರವನ್ನು ಟ್ರೋಲ್ ಮಾಡಿದ್ದು, ಇದೀಗ ಭೂಪಟವನ್ನು ತಪ್ಪಾಗಿ ತೋರಿಸಿ ಕಾಶ್ಮೀರವನ್ನು ಭಾರತದ ಭಾಗವಾಗಿ ಗುರುತಿಸಿರುವ ಭೂಪಟವನ್ನು ಬಿತ್ತರಿಸಿದ್ದ ಪಿಟಿವಿ ಪತ್ರಕರ್ತರನ್ನು ವಜಾಗೊಳಿಸಲಾಗಿದೆ.