
ಕರಾಚಿ, ಮೇ 22 : ಪಾಕಿಸ್ತಾನ್ ಏರ್ ಲೈನ್ಸ್ ಗೆ ಸೇರಿದ ಲಾಹೋರ್ ನಿಂದ ಕರಾಚಿಗೆ ತೆರಳುತ್ತಿದ್ದ ಪಾಕಿಸ್ತಾನದ ವಿಮಾನ ಪತನಗೊಂಡಿದೆ. 90 ಕ್ಕೂ ಅಧಿಕ ಪ್ರಯಾಣಿಕರು ಇದರಲ್ಲಿ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗುತ್ತಿದ್ದು, ಕರಾಚಿ ವಿಮಾನ ನಿಲ್ದಾಣದ ಬಳಿ ವಿಮಾನ ಪತನಗೊಂಡಿದೆ.
ವಿಮಾನವು ಜನ ವಸತಿ ಪ್ರದೇಶದಲ್ಲಿ ಪತನಗೊಂಡಿದ್ದು, ಹೆಚ್ಚಿನ ಸಾವು-ನೋವು ಸಂಭವಿಸಿರಬಹುದೆಂದು ಹೇಳಲಾಗುತ್ತಿದೆ. ಲಾಹೋರ್ ನಿಂದ ಹೊರಟಿದ್ದ ವಿಮಾನ ಕರಾಚಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವ ಸ್ವಲ್ಪ ಮೊದಲು ಪತನಗೊಂಡಿದೆ ಎಂದು ಪಾಕಿಸ್ತಾನದ ವರದಿಗಳು ಹೇಳಿವೆ.
ವಿಮಾನದಲ್ಲಿ ತಲೆದೋರಿದ ತಾಂತ್ರಿಕ ದೋಷದಿಂದಾಗಿ ವಿಮಾನ ಪತನಗೊಂಡಿದೆ ಎಂದು ಹೇಳಲಾಗುತ್ತಿದ್ದು, ನೂರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ. ರಕ್ಷಣಾ ಪಡೆಗಳು ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ
ಏರ್ ಬಸ್ ನಿರ್ಮಿತ ಎ320 ಮಾದರಿಯ ವಿಮಾನ ಇದಾಗಿದ್ದು, ಪಾಕಿಸ್ತಾನ್ ಇಂಟರ್ ನ್ಯಾಶನಲ್ ಏರ್ ಲೈನ್ಸ್ ಗೆ ಸೇರಿದೆ. ವಿಮಾನದಲ್ಲಿ 99 ಪ್ರಯಾಣಿಕರು ಮತ್ತು ಎಂಟು ಸಿಬ್ಬಂದಿಗಳು ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.
ವಿಮಾನ ಮಾಡೆಲ್ ಕಾಲನಿ ಸಮೀಪದ ವಸತಿ ಪ್ರದೇಶದಲ್ಲಿ ಪತನವಾಗಿದ್ದು, ವಿಮಾನ ಬಿದ್ದ ಕೂಡಲೇ ಭೀಕರವಾದ ಸದ್ದು ಮತ್ತು ಧೂಳು ಎದ್ದಿದ್ದು, ಬಳಿಕ ಹೊಗೆ ಆವರಿಸಿಕೊಂಡಿದೆ. ಸಾವು-ನೋವು, ನಾಶ ನಷ್ಟದ ಅಂದಾಜು ಇನ್ನಷ್ಟೇ ಲಭಿಸಬೇಕಾಗಿದೆ.








