ಪಾಕ್ ರಾಜಕೀಯ ಪಲ್ಲಟ – 8.30PM ಗೆ ಅವಿಶ್ವಾಸ ನಿರ್ಣಯ, ಅದಕ್ಕೂ ಮೊದಲೇ ಇಮ್ರಾನ್ ರಾಜಿನಾಮೆ ಸಾಧ್ಯತೆ
ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಸಂಸತ್ತಿನಲ್ಲಿ ಮುಂದುವರಿದಿದೆ. ಮತದಾನಕ್ಕೆ ರಾತ್ರಿ 8:30ಕ್ಕೆ ಸಮಯವನ್ನು ನಿಗದಿಪಡಿಸಲಾಗಿದೆ. 9:30ಕ್ಕೆ ಇಮ್ರಾನ್ ಖಾನ್ ಸಂಪುಟ ಸಭೆ ನಡೆಸಲಿದ್ದಾರೆ. ಇಮ್ರಾನ್ ಖಾನ್ ಅಧ್ಯಕ್ಷ ಆರಿಫ್ ಅಲ್ವಿ ಬಳಿಗೆ ಹೋಗಿ ಯಾವುದೇ ಸಮಯದಲ್ಲಿ ರಾಜೀನಾಮೆ ಸಲ್ಲಿಸಬಹುದು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಅವರ ಕೆಲವು ಸಚಿವರು ತಮ್ಮನ್ನು ಮಾಜಿ ಸಚಿವರು ಎಂದು ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಬರೆದುಕೊಂಡಿದ್ದಾರೆ.
ಇದಕ್ಕೂ ಮುನ್ನ ರಾಷ್ಟ್ರೀಯ ಅಸೆಂಬ್ಲಿಯ ಕಲಾಪ ಬೆಳಗ್ಗೆ 11:15ಕ್ಕೆ ಆರಂಭವಾಯಿತು. ಇಮ್ರಾನ್ ಸಂಸತ್ತಿಗೆ ಗೈರಾಗಿದ್ದರು. ಪ್ರತಿಪಕ್ಷದ ನಾಯಕ ಶಹಬಾಜ್ ಷರೀಫ್ ಮತ್ತು ಇಮ್ರಾನ್ ಸಚಿವ ಶಾ ಮೆಹಮೂದ್ ಖುರೇಷಿ ನಡುವೆ ತೀವ್ರ ಮಾತಿನ ಸಮರ ನಡೆಯಿತು. ವಿದೇಶಿ ಷಡ್ಯಂತ್ರದ ವಿಷಯವನ್ನು ಚರ್ಚಿಸಲು ಸ್ಪೀಕರ್ ಅಸದ್ ಕೈಸರ್ ಅವರನ್ನು ಕೇಳಿದಾಗ, ಪ್ರತಿಪಕ್ಷಗಳು ಕೆರಳಿದವು. ಕೈಸರ್ ಕಲಾಪವನ್ನು ಮುಂದೂಡಿದರು.
ವಿದೇಶಿ ಪಿತೂರಿಯ ವಿಷಯದ ಬಗ್ಗೆ ಕ್ಯಾಬಿನೇಟ್ ಸಚಿವ ಖುರೇಷಿ ಮಾತನಾಡಿ – ಪ್ರತಿಪಕ್ಷಗಳಿಗೆ ವಿಶ್ವಾಸವಿಲ್ಲದಿದ್ದರೆ ಇನ್-ಕ್ಯಾಮೆರಾ ಅಧಿವೇಶನವನ್ನು ಕರೆಯಬಹುದು. ಅಮೆರಿಕದಲ್ಲಿರುವ ಪಾಕಿಸ್ತಾನದ ರಾಯಭಾರಿಯನ್ನು ಸಂಸತ್ತಿಗೆ ಕರೆಸಿ ಸತ್ಯವನ್ನು ಸಾಬೀತುಪಡಿಸಬಹುದು. ಅಮೆರಿಕವನ್ನು ಕುರುಡಾಗಿ ಬೆಂಬಲಿಸಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದರು.
ಮಾರ್ಚ್ 7 ರಂದು ವಾಷಿಂಗ್ಟನ್‌ನಲ್ಲಿ ಸಭೆ ನಡೆಯಿತು ಮತ್ತು ಮಾರ್ಚ್ 8 ರಂದು ಪಾಕಿಸ್ತಾನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲಾಯಿತು. ಚುನಾವಣಾ ಆಯೋಗವು 3 ತಿಂಗಳಲ್ಲಿ ಚುನಾವಣೆ ನಡೆಸಲು ನಿರಾಕರಿಸಿತು, ಆದರೆ ಸಂವಿಧಾನದ ಪ್ರಕಾರ, ಸಂಸತ್ತು ವಿಸರ್ಜನೆಯ ನಂತರ 90 ದಿನಗಳಲ್ಲಿ ಚುನಾವಣೆ ನಡೆಸುವುದು EC ಯ ಕರ್ತವ್ಯವಾಗಿದೆ ಎಂದು ಖುರೇಷಿ ಹೇಳಿದರು.