ದುಬೈ: ಅಂಡರ್-19 ಏಷ್ಯಾಕಪ್ ಟೂರ್ನಿಯ ಆರಂಭವೇ ರೋಚಕ ತಿರುವುಗಳನ್ನು ಪಡೆದುಕೊಂಡಿದೆ. ಟೂರ್ನಿಯ ಮೊದಲ ದಿನದಾಟದಲ್ಲಿ ಭಾರತದ ಯುವ ಆಟಗಾರ ವೈಭವ್ ಸೂರ್ಯವಂಶಿ ಅಬ್ಬರಿಸಿ ದಾಖಲೆ ಬರೆದರೆ, ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನದ ಆಟಗಾರನೊಬ್ಬ ಆ ದಾಖಲೆಯನ್ನು ಮುರಿದು ವಿಶ್ವ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ದುಬೈನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿಯಲ್ಲಿ ರನ್ ಮಳೆ ಸುರಿಯುತ್ತಿದ್ದು, ಬ್ಯಾಟರ್ಗಳ ಆರ್ಭಟಕ್ಕೆ ಬೌಲರ್ಗಳು ಕಂಗಾಲಾಗಿದ್ದಾರೆ. ಒಂದೇ ದಿನ ಎರಡು ಭರ್ಜರಿ ಶತಕಗಳು ದಾಖಲಾಗಿದ್ದು, ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದೆ.
ವೈಭವ್ ಸೂರ್ಯವಂಶಿ ಸ್ಪೋಟಕ ಆಟ
ದುಬೈನ ಐಸಿಸಿ ಅಕಾಡೆಮಿ ಮೈದಾನದಲ್ಲಿ ಯುಎಇ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಭಾರತದ ವೈಭವ್ ಸೂರ್ಯವಂಶಿ ಅಕ್ಷರಶಃ ಅಬ್ಬರಿಸಿದ್ದರು. ಎದುರಾಳಿ ಬೌಲರ್ಗಳನ್ನು ಬೆಂಡೆತ್ತಿದ ವೈಭವ್, ಕೇವಲ 95 ಎಸೆತಗಳಲ್ಲಿ 171 ರನ್ ಚಚ್ಚಿದರು. ಇವರ ಈ ಸ್ಪೋಟಕ ಇನಿಂಗ್ಸ್ನಲ್ಲಿ ಬರೋಬ್ಬರಿ 14 ಸಿಕ್ಸರ್ ಹಾಗೂ 9 ಫೋರ್ಗಳು ಸೇರಿದ್ದವು. ಈ ಮೂಲಕ 2025ರ ಅಂಡರ್-19 ಏಷ್ಯಾಕಪ್ ಟೂರ್ನಿಯಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ವೈಭವ್ ಪಾತ್ರರಾಗಿದ್ದರು.
ರೆಕಾರ್ಡ್ ಬ್ರೇಕ್ ಮಾಡಿದ ಪಾಕ್ ಆಟಗಾರ ಸಮೀರ್
ವೈಭವ್ ಸೂರ್ಯವಂಶಿ ನಿರ್ಮಿಸಿದ ಈ ದಾಖಲೆ ದಿನ ಕಳೆಯುವ ಮುನ್ನವೇ ಇತಿಹಾಸದ ಪುಟ ಸೇರಿದೆ. ದುಬೈನ ಸೆವೆನ್ಸ್ ಸ್ಟೇಡಿಯಂನಲ್ಲಿ ಮಲೇಷ್ಯಾ ವಿರುದ್ಧ ನಡೆದ ಪಂದ್ಯದಲ್ಲಿ ಕಣಕ್ಕಿಳಿದ ಪಾಕಿಸ್ತಾನದ ಸಮೀರ್ ಮಿನ್ಹಾಸ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಆರಂಭಿಕನಾಗಿ ಕಣಕ್ಕಿಳಿದ ಸಮೀರ್, 148 ಎಸೆತಗಳಲ್ಲಿ 8 ಸಿಕ್ಸರ್ ಹಾಗೂ 11 ಬೌಂಡರಿಗಳ ನೆರವಿನಿಂದ ಅಜೇಯ 177 ರನ್ ಸಿಡಿಸಿದರು. ಈ ಮೂಲಕ ವೈಭವ್ (171 ರನ್) ಹೆಸರಿನಲ್ಲಿದ್ದ ಟೂರ್ನಿಯ ಗರಿಷ್ಠ ಸ್ಕೋರ್ ದಾಖಲೆಯನ್ನು ತಮ್ಮದಾಗಿಸಿಕೊಂಡರು.
ಪದಾರ್ಪಣೆ ಪಂದ್ಯದಲ್ಲೇ ವಿಶ್ವ ದಾಖಲೆ
ಸಮೀರ್ ಮಿನ್ಹಾಸ್ ಅವರ ಈ ಶತಕ ಕೇವಲ ಏಷ್ಯಾಕಪ್ ದಾಖಲೆಯಾಗಿ ಉಳಿದಿಲ್ಲ, ಬದಲಾಗಿ ಇದೊಂದು ಹೊಸ ವಿಶ್ವ ದಾಖಲೆಯಾಗಿದೆ. ಯೂತ್ ಏಕದಿನ ಕ್ರಿಕೆಟ್ಗೆ (Youth ODI) ಪದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲೇ ಗರಿಷ್ಠ ರನ್ ಗಳಿಸಿದ ವಿಶ್ವದ ಏಕೈಕ ಬ್ಯಾಟರ್ ಎಂಬ ಕೀರ್ತಿಗೆ ಸಮೀರ್ ಪಾತ್ರರಾಗಿದ್ದಾರೆ.
ಇದಕ್ಕೂ ಮುನ್ನ ಈ ವಿಶ್ವ ದಾಖಲೆ ವೆಸ್ಟ್ ಇಂಡೀಸ್ ಆಟಗಾರನ ಹೆಸರಿನಲ್ಲಿತ್ತು. 2002ರಲ್ಲಿ ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವಿಂಡೀಸ್ನ ಡೊನೊವೆನ್ ಪಾಗೊನ್ 176 ರನ್ ಬಾರಿಸಿದ್ದರು. ಇದೀಗ ಸುಮಾರು ಎರಡು ದಶಕಗಳ ಬಳಿಕ, ಪಾಕಿಸ್ತಾನದ ಸಮೀರ್ ಮಿನ್ಹಾಸ್ ಅಜೇಯ 177 ರನ್ ಗಳಿಸುವ ಮೂಲಕ ಆ ಹಳೆಯ ದಾಖಲೆಯನ್ನು ಧೂಳೀಪಟ ಮಾಡಿದ್ದಾರೆ.
ಒಟ್ಟಿನಲ್ಲಿ ಅಂಡರ್-19 ಏಷ್ಯಾಕಪ್ನ ಆರಂಭಿಕ ಪಂದ್ಯಗಳಲ್ಲೇ ಭಾರತ ಮತ್ತು ಪಾಕಿಸ್ತಾನದ ಆಟಗಾರರು ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರುವುದು ಟೂರ್ನಿಯ ಮೇಲಿನ ಕುತೂಹಲವನ್ನು ಇಮ್ಮಡಿಗೊಳಿಸಿದೆ.








