ಭಯೋತ್ಪಾದಕರ ದಾಳಿಯಲ್ಲಿ ಪಾಕ್ ಅರೆಸೇನಾ ಪಡೆಯ ಐವರು ಸೈನಿಕರು ಸಾವು
ಪಾಕಿಸ್ತಾನ : ಉಗ್ರ ಪೋಷಿತ ದೇಶ ಎಂಬ ಕುಖ್ಯಾತಿ ಪಡೆದಿರುವ ಪಾಕಿಸ್ತಾನದಲ್ಲೂ ಉಗ್ರ ಅಟ್ಟಹಾಸದಿಂದ ಅಲ್ಲಿನ ಜನರು ಕಂಗಾಲಾಗಿದ್ದಾರೆ. ಆಗಾಗ ಉಗ್ರ ದಾಳಿಗಳಿಂದಾಳಗಿ ಅನೇಕರು ಜೀವ ಕಳೆದುಕೊಂಡಿದ್ದಾರೆ.
ಇದೀಗ ಬಲೂಚಿಸ್ತಾನ ಪ್ರಾಂತ್ಯದ ವ್ಯಾಪ್ತಿಯ ಜಿಲ್ಲೆಯೊಂದರಲ್ಲಿ ಗಸ್ತು ತಿರುಗುತ್ತಿದ್ದ ಭದ್ರತಾ ಪಡೆಗಳನ್ನು ಗುರಿಯಾಗಿಸಿ ಭಯೋತ್ಪಾದಕರು ನಡೆಸಿರುವ ದಾಳಿಯಲ್ಲಿ ಅರೆಸೇನಾ ಪಡೆಯ ಐವರು ಸೈನಿಕರು ಹತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಐಎಸ್‌ಪಿಆರ್ ಮಾಹಿತಿ ನೀಡಿರುವ ಪ್ರಕಾರ, ಬಲೂಚಿಸ್ತಾನದ ಫ್ರಂಟಿಯರ್ ಕಾರ್ಪ್ಸ್‌ಗೆ ಸೇರಿದ ಐವರು ಸೈನಿಕರು ಭಯೋತ್ಪಾದಕರೊಂದಿಗೆ ಗುಂಡಿನ ಸಂಘರ್ಷ ನಡೆಸುವಾಗ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಬಲೂಚಿಸ್ತಾನದ ಸಿಬಿ ಜಿಲ್ಲೆಯ ಸಂಗನ್ ಪ್ರದೇಶದಲ್ಲಿ ಭಯೋತ್ಪಾದಕರ ವಿರುದ್ಧ ನಡೆದ ಈ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರಿಗೆ ಭಾರಿ ನಷ್ಟವಾಗಿದೆ ಎಂದೂ ಸಹ ತಿಳಿದುಬಂದಿದೆ.
ಆಂತರಿಕ ಭದ್ರತಾ ಸಚಿವ ಶೇಖ್ ರಶೀದ್ ಅಹ್ಮದ್ ಈ ದಾಳಿ ಖಂಡಿಸಿದ್ದಾರೆ. ಇಂತಹ ಹೇಡಿತನದ ದಾಳಿಗಳನ್ನು ನಡೆಸುವ ಮೂಲಕ ಭಯೋತ್ಪಾದಕರು ನಮ್ಮನ್ನು ನಿರಾಶೆಗೊಳಿಸಲಾಗದು. ದೇಶವು ಭಯೋತ್ಪಾದಕರ ವಿರುದ್ಧ ತನ್ನ ಎಲ್ಲ ಶಕ್ತಿಯಿಂದ ಹೋರಾಡಲಿದೆ ಎಂದು ಹೇಳಿಕೊಂಡಿದ್ದಾರೆ.








