ಟಾಲಿವುಡ್ ನಲ್ಲಿ ರಾಜಕೀಯ ನಾಯಕರ ಸಿನಿಮಾಗಳಿಗೆ ಕಡಿಮೆ ಏನಿಲ್ಲ. ಈಗಾಗಲೇ ಹಲವು ರಾಜಕೀಯ ನಾಯಕರ ಜೀವನ ತೆರೆಮೇಲೆ ಸಿನಿಮಾ ಆಗಿ ತೆರೆಗೆ ಬಂದಿವೆ. ಒಂದಷ್ಟು ಮೆಚ್ಚುಗೆ ಪಡೆದುಕೊಂಡರೆ ಮತ್ತೆ ಕೆಲವು ಪ್ಲಾಪ್ ಪಟ್ಟಿ ಸೇರಿವೆ. ಆದರೂ ಅಲ್ಲಿ ರಾಜಕೀಯ ನಾಯಕರ ಕುರಿತ ಸಿನಿಮಾಗಳು ಸೆಟ್ಟೇರುತ್ತಲೇ ಇರುತ್ತವೆ. ಅದರಂತೆ ಇದೀಗ ತೆಲಂಗಾಣ ಸಿಎಂ ಟಿಆರ್ ಎಸ್ ಪಾರ್ಟಿಯ ಮುಖ್ಯಸ್ಥ ಕೆ. ಚಂದ್ರ ಶೇಖರ್ ರಾವ್ ಅವರ ಜೀವನ ಕಥೆ ಸಿನಿಮಾ ರೂಪ ಪಡೆದುಕೊಳ್ಳಲಿದೆ.
ಅಂದಹಾಗೆ ಕೆಸಿಆರ್, ತೆಲಂಗಾಣದ ಮಾಸ್ ಲೀಡರ್. ಇಂದು ತೆಲಂಗಾಣ ಎಂಬ ಪ್ರತ್ಯೇಕ ರಾಜ್ಯ ಹುಟ್ಟಿಕೊಂಡಿದೇ ಅಂದ್ರೆ ಅದಕ್ಕೆ ಮುಖ್ಯ ಕಾರಣ ಕೆಸಿಆರ್ ಅವರ ಹೋರಾಟ. ತೆಲಂಗಾಣ ಪ್ರತ್ಯೇಕ ರಾಜ್ಯಕ್ಕಾಗಿ ಚಂದ್ರಶೇಖರ್ ರಾವ್ ಅವರು ಹೊಸ ಪಕ್ಷ ಕಟ್ಟಿ ಹಗಲಿರುಳು ಹೋರಾಡಿದ್ದಾರೆ. ಅಲ್ಲದೆ ಅನಿರ್ಧಿಷ್ಠಾವಧಿ ಉಪವಾಸ ಸತ್ಯಾಗ್ರಹ ಮಾಡಿದ್ದಾರೆ. ಇವರ ಹೋರಾಟದ ಫಲವಾಗಿ ದೇಶದಲ್ಲಿ ತೆಲಂಗಾಣ ಎಂಬ ರಾಜ್ಯ ಉದಯಿಸಿದೆ. ಹೀಗಾಗಿ ಇವರಿಗೆ ಕೋಟ್ಯಂತರ ಮಂದಿ ಅನುಯಾಯಿಗಳಿದ್ದಾರೆ. ಈಗಲೂ ಇವರನ್ನು ತೆಲಂಗಾಣ ಭಾಗದ ಜನರ ದೇವರಂತೆ ಕಾಣುತ್ತಾರೆ. ಹೀಗಾಗಿಯೇ ಕೆಸಿಆರ್ ಅವರ ಜೀವನ ಕಥೆಯನ್ನ ಬೆಳ್ಳಿಪರದೆ ಮೇಲೆ ತರುವ ಕೆಲಸ ಆಗುತ್ತಿದೆ.
ಕಳೆದ ಎರಡು ವರ್ಷದ ಹಿಂದೆಯೇ ಕೆಸಿಆರ್ ರಾಜಕೀಯ ಜೀವನವನ್ನು ಸಿನಿಮಾ ಮಾಡುವುದಾಗಿ ನಿರ್ದೇಶಕ ಶ್ರೀಧರ್ ರೆಡ್ಡಿ ಹೇಳಿಕೊಂಡಿದ್ದರು. ಆದರೆ, ಕಾರಣಾಂತರಗಳಿಂದ ಸಿನಿಮಾ ಸೆಟ್ಟೇರಲಿಲ್ಲ. ಆದರೆ, ಇದೀಗ ಎರಡು ವರ್ಷದ ಬಳಿಕ ಮತ್ತೆ ಸಿನಿಮಾ ಶುರುವಾಗಲಿದೆ ಎಂಬ ಮಾತುಗಳು ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿವೆ.
ಇತ್ತೀಚೆಗಷ್ಟೇ ಈ ಸಿನಿಮಾ ಬಗ್ಗೆ ಮಾತನಾಡಿರುವ ನಿರ್ದೇಶಕ ಶ್ರೀಧರ್ ರೆಡ್ಡಿ,’ಕೆಸಿಆರ್ ಕುರಿತ ಸಿನಿಮಾ ಮಾಡುವುದು ನನ್ನ ಕನಸು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ನಿರ್ಮಾಣ ಮಾಡುವ ಪ್ಲ್ಯಾನ್ ಇದೆ. 20 ಕೋಟಿ ವೆಚ್ಚದಲ್ಲಿ ಸಿದ್ದವಾಗಲಿರುವ ಈ ಸಿನಿಮಾ ತೆಲಂಗಾಣದ ಪ್ರತಿ ಪ್ರಜೆಯೂ ಹೆಮ್ಮೆ ಪಡಬೇಕು ಆ ರೀತಿಯಲ್ಲಿ ಈ ಸಿನಿಮಾ ಮೂಡಿಬರಲಿದೆ’ ಎಂದಿದ್ದಾರೆ.
ಕಳೆದ ವರ್ಷ ಆಂಧ್ರಪ್ರದೇಶದ ಮಾಜಿ ಸಿಎಂಗಳಾದ ಎನ್ ಟಿಆರ್, ವೈ.ಎಸ್ ರಾಜಶೇಖರ್ ರೆಡ್ಡಿ ಅವರ ಕುರಿತ ಚಿತ್ರಗಳು ಬಿಡುಗಡೆಯಾಗಿದ್ದವು.