ಮಂಗಳೂರು : ಕರಾವಳಿ ಪ್ರದೇಶದ ದೈವಾರಾಧನೆ ಬಗ್ಗೆ ಪಂಜುರ್ಲಿ ಎಂಬ ಕನ್ನಡ ಕಿರುಚಿತ್ರ ಯುಟ್ಯೂಬ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಈವರೆಗೂ ಈ ವಿಡಿಯೋವನ್ನು 30 ಸಾವಿರ ಮಂದಿ ವೀಕ್ಷಿಸಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಪಂಜುರ್ಲಿ ಕಿರುಚಿತ್ರದಲ್ಲಿ ಕರಾವಳಿಯ ಸುಂದರ ಸಂಸ್ಕೃತಿ ಹಾಗೂ ಕರಾವಳಿಯ ದೈವಾರಾದನೆ ಕುರಿತ ಚಿತ್ರಣ ನೀಡಲಾಗಿದೆ. ಕೆ.ಬಿ ಪ್ರವೀಣ್ ನಿರ್ದೇಶನದ ಈ ಕಿರುಚಿತ್ರದಲ್ಲಿ ರಂಗಿತರಂಗ ಖ್ಯಾತಿಯ ಕೆವಿಆರ್, ಕೆ ಬಿ ಪ್ರವೀಣ್, ವಿ ಜೆ ದೀಪಕ್ ಭಟ್, ಶ್ರೀಶಾ ತಮಂಕರ್, ದೀಪಕ್ ಹೆಬ್ಬಾರ್, ಸಚಿನ್ ಲೊಂದೆ ಕಾಣಿಸಿಕೊಂಡಿದ್ದಾರೆ.
ಚಿತ್ರವನ್ನು ನಿರ್ದೇಶಿಸುವುದರ ಹೊರತಾಗಿ, ಕಾರ್ಕಳ ಮೂಲದ ಕೆ ಬಿ ಪ್ರವೀಣ್ ಅವರು ಕಥೆಯನ್ನು ಬರೆದಿದ್ದಾರೆ. ಹಾಗೇ ಹಿನ್ನೆಲೆ ಸಂಗೀತ ಮತ್ತು ಚಿತ್ರಕ್ಕೆ ಧ್ವನಿ ವಿನ್ಯಾಸವನ್ನು ಸಂಯೋಜಿಸಿದ್ದಾರೆ. ಕೆ ಬಿ ಪ್ರವೀಣ್ ಅವರು ಆಪರೇಷನ್ ಅಲಮೇಲಮ್ಮ, ಮಾಯಾಬಜಾರ್, ಲಂಡನ್‌ನಲ್ಲಿ ಲಂಬೋದರ ಚಿತ್ರದಲ್ಲಿ ನಟಿಸಿದ್ದು, ಇನ್ನಷ್ಟೆ ತೆರೆಕಾಣಬೇಕಿದೆ.
ಚಿತ್ರದ ಸಂಭಾಷಣೆಯನ್ನು ಕೆ ಬಿ ಪವನ್ ಬರೆದಿದ್ದು, ಪ್ರಜ್ವಲ್ ಗೋರ್ ಅವರು ಪೋಸ್ಟರ್, ಸಾಗರ್ ಗಣೇಶ್ ಸಂಪಾದನೆ ಮಾಡಿದ್ದಾರೆ. ಪ್ರಣವ್ ಭಾವೆ ಛಾಯಾಗ್ರಹಣ, ವೈಮಾನಿಕ ಛಾಯಾಗ್ರಹಣ ಪೃಥ್ವಿ ಜೈನ್ ಮಾಡಿದ್ದು ಪಿಟೀಲು ವಾದಕ ಎ ಆರ್ ಕೃಷ್ಣಮೂರ್ತಿ ಸಂಗೀತ ನೀಡಿದ್ದಾರೆ.








