ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೆ ಮತ್ತೆ ಜಗತ್ ಜಾಹೀರಾಗುತ್ತಲೇ ಇದೆ. ಕೆಪಿಸಿಸಿ ಅಧ್ಯಕ್ಷ ನೇಮಕ ವಿಚಾರವಾಗಿ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಪರೋಕ್ಷವಾಗಿ ಕತ್ತಿ ಮಸೆಯುತ್ತಲೇ ಇದ್ದಾರೆ. ಮುಖ್ಯವಾಗಿ ಡಿ.ಕೆ ಶಿವಕುಮಾರ್ ಅವರ ನಡೆ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದ್ದು, ಈವರೆಗೂ ಅವರು ಅಧಿವೇಶನಕ್ಕೆ ಹಾಜರಾಗಿಲ್ಲ. ಈ ಮಧ್ಯೆ ಡಾ. ಜಿ ಪರಮೇಶ್ವರ್ ಸದನದಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ ಎನ್ನಲಾಗಿದೆ.
ಇಂದಿನಿಂದ ಮತ್ತೆ ವಿಧಾನ ಮಂಡಲದ ಅಧಿವೇಶನ ಪುನರಾರಂಭವಾಗಿದ್ದು, ಮೊದಲ ಹಂತವಾಗಿ ಅಗಲಿದ ನಾಯಕರಿಗೆ ಸದನದಲ್ಲಿ ಸಂತಾಪ ಸೂಚಿಸಲಾಯಿತು. ಈ ವೇಳೆ ಸ್ವಾತಂತ್ರ್ಯ ಹೋರಾಟಗಾರ ಸುಧಾಕರ್ ಚತುರ್ವೇಧಿ ಅವರ ಬಗ್ಗೆ ಪರಮೇಶ್ವರ್ ಮಾತನಾಡುತ್ತಾ, ಅವರು 12 ವರ್ಷಗಳ ಕಾಲ ಜೈಲಿನಲ್ಲಿದ್ದರು. ಆದ್ರೆ ಇದೀಗ ಏನೋ ತಪ್ಪು ಮಾಡಿ 2-3 ದಿನಗಳ ಕಾಲ ಜೈಲಿನಲ್ಲಿದ್ದರೇ ಬೊಬ್ಬೆ ಹೊಡೆಯುತ್ತಾರೆ ಎಂದ್ರು. ಇದೇ ಮಾತು ಇದೀಗ ರಾಜಕೀಯ ಪಡಸಾಲೆಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಡಾ. ಜಿ ಪರಮೇಶ್ವರ್ ಅವರು ಡಿಕೆಶಿಗೆ ಟಾಂಗ್ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
ಕಾರಣ ಏನಿರಬಹುದು?
ಅಂದಹಾಗೆ ಡಾ.ಜಿ. ಪರಮೇಶ್ವರ್ ಈ ಮಾತು ಹೇಳಲು ಕಾರಣವೇನು..? ಡಿ.ಕೆ ಶಿವಕುಮಾರ್ ಅವರ ಬಗ್ಗೆ ಪರಮೇಶ್ವರ್ ಗೆ ಅಸಮಾಧಾನ ಇದ್ಯಾ ಎಂಬುದನ್ನು ನೋಡೋದಾದ್ರೆ.. ಕೆಲ ಘಟನೆಗಳನ್ನು ಉಲ್ಲೇಖ ಮಾಡಲೇ ಬೇಕಾಗುತ್ತದೆ. 1. ಜೈಲಿನಿಂದ ಬಂದ ಡಿಕೆಶಿಗೆ ಮಾಸ್ ಲೀಡರ್ ಇಮೇಜ್. 2. ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಿಕೊಂಡಿದ್ದು. 3. ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಹಿಡಿತ ಸಾಧಿಸಲು ಹೊರಟಿದ್ದು. ಮೇಲ್ನೋಟಕ್ಕೆ ಈ ಮೂರು ಅಂಶಗಳೇ ಟ್ರಬಲ್ ಶೂಟರ್ ಗೆ ಪರಮೇಶ್ವರ್ ಟಾಂಗ್ ಕೊಡಲು ಕಾರಣ ಎನ್ನಲಾಗುತ್ತಿದೆ. ಎಲ್ಲರಿಗೂ ಗೊತ್ತಿರುವಂತೆ ಪರಮೇಶ್ವರ್ ಅವರು ಸಿಎಂ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದರು. ಸಿದ್ದರಾಮಯ್ಯ ಬಳಿಕ ಕಾಂಗ್ರೆಸ್ ನಲ್ಲಿ ನಾನೇ ಸಿಎಂ ಅಭ್ಯರ್ಥಿ ಎಂದು ಬಿಂಬಿಸಿಕೊಂಡಿದ್ದರು. ಆದ್ರೆ ಯಾವಾಗ ಡಿ.ಕೆ ಶಿವಕುಮಾರ್ ತಮಗಿಂತ ಬಲಿಷ್ಠವಾಗಿ, ಮಾಸ್ ಲೀಡರ್ ಆಗಿ, ಮುಂದಿನ ಸಿಎಂ ಆಗಿ ಗುರುತಿಸಿಕೊಳ್ಳಲು ಮುಂದಾದ್ರೋ ಅಂದಿನಿಂದ ಪರಮೇಶ್ವರ್ ಟೆನ್ಷನ್ ಶುರುವಾಗಿದೆ. ಇಷ್ಟು ದಿನ ಸಿದ್ದರಾಮಯ್ಯ ಮಾತ್ರ ತಮ್ಮ ಸಿಎಂ ಗಾದಿ ದಾರಿಗೆ ಅಡ್ಡಿ ಅಂದುಕೊಂಡಿದ್ದ ಪರಮೇಶ್ವರ್ ಗೆ ಡಿಕೆಶಿ ಬೆಳವಣಿಗೆ ನುಂಗಲಾರದ ತುತ್ತಾಗಿದೆ ಎನ್ನಲಾಗುತ್ತಿದೆ. ಹೀಗಾಗಿಯೇ ಇಂದು ಸದನದಲ್ಲಿ ಡಿ.ಕೆ ಶಿವಕುಮಾರ್ ಗೆ ಪರಮೇಶ್ವರ್ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.