ಕೋಲಾರ: ನಾನು ಮೃದು ಸ್ವಭಾವದವನು, ಆದರೂ ನನಗೆ ಗೃಹ ಇಲಾಖೆಯಂತಹ ಜವಾಬ್ದಾರಿಯುತ ಖಾತೆಯನ್ನೇ ನೀಡುತ್ತಾರೆ. ವಿರೋಧ ಪಕ್ಷಗಳು ನನ್ನನ್ನು ಅಸಮರ್ಥ ಎಂದು ಕರೆದರೆ ಅದಕ್ಕೆ ತಲೆಬಾಗುವ ಜಾಯಮಾನ ನನ್ನದಲ್ಲ. ಟೀಕೆಗಳಿಗೆ ಜಗ್ಗುವ ಮಗ ನಾನಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ವಿರೋಧ ಪಕ್ಷಗಳ ವಿರುದ್ಧ ಗುಡುಗಿದ್ದಾರೆ.
ಕೋಲಾರದ ಕೆಜಿಎಫ್ ನಗರದಲ್ಲಿ ಭಾರತೀಯ ಮೀಸಲು ಪಡೆಯ ನೂತನ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ಅವರು, ತಮ್ಮ ಕಾರ್ಯವೈಖರಿಯನ್ನು ಪ್ರಶ್ನಿಸುವವರಿಗೆ ವೇದಿಕೆಯ ಮೇಲೆಯೇ ಕಟುವಾದ ಶಬ್ದಗಳಲ್ಲಿ ತಿರುಗೇಟು ನೀಡಿದ್ದಾರೆ.
ನನಗೇ ಯಾಕೆ ಈ ಪೊಲೀಸ್ ಇಲಾಖೆ ಕೊಡುತ್ತಾರೋ
ಸಾಮಾನ್ಯವಾಗಿ ಗೃಹ ಸಚಿವರು ಎಂದರೆ ಸ್ವಲ್ಪ ಗಡಸು ಸ್ವಭಾವದವರು ಇರಬೇಕು ಎಂಬ ಭಾವನೆ ಇದೆ. ಆದರೆ ನಾನು ಮೃದು ಸ್ವಭಾವದವನು, ಎಲ್ಲರೊಂದಿಗೂ ಮೆಲ್ಲಗೆ ಮಾತನಾಡುತ್ತೇನೆ. ಆದರೂ ಹೈಕಮಾಂಡ್ ಹಾಗೂ ಸರ್ಕಾರ ನನಗೆ ಪದೇ ಪದೇ ಪೊಲೀಸ್ ಇಲಾಖೆಯ ಹೊಣೆಯನ್ನೇ ನೀಡುತ್ತದೆ. ನನಗೇ ಯಾಕೆ ಈ ಖಾತೆ ಕೊಡುತ್ತಾರೋ ಗೊತ್ತಿಲ್ಲ ಎಂದು ಸಚಿವರು ಅಚ್ಚರಿ ವ್ಯಕ್ತಪಡಿಸುವ ಮೂಲಕ, ತಮ್ಮ ಮೃದು ಸ್ವಭಾವದ ನಡುವೆಯೂ ಕಠಿಣ ಖಾತೆಯನ್ನು ನಿಭಾಯಿಸುವ ಶಕ್ತಿ ತಮಗಿದೆ ಎಂದು ಮಾರ್ಮಿಕವಾಗಿ ನುಡಿದರು.
ಅಸಮರ್ಥ ಎನ್ನುವವರಿಗೆ ಖಡಕ್ ಸಂದೇಶ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಗೃಹ ಸಚಿವರು ಅಸಮರ್ಥರು ಎಂದು ವಿರೋಧ ಪಕ್ಷಗಳು ಮಾಡುತ್ತಿರುವ ಟೀಕೆಗೆ ಪರಮೇಶ್ವರ್ ಕೆಂಡಾಮಂಡಲರಾದರು. ಎಲ್ಲೋ ಒಂದು ಕಡೆ ಕೊಲೆಯಾದರೆ ಅಥವಾ ಅಹಿತಕರ ಘಟನೆ ನಡೆದರೆ, ಗೃಹ ಸಚಿವರಿಗೆ ಸಾಮರ್ಥ್ಯವಿಲ್ಲ ಎಂದು ಬಾಯಿ ಬಂದಂತೆ ಮಾತನಾಡುತ್ತಾರೆ. ಅವನ್ಯಾರೋ ಗಂಧ-ಗಾಳಿ ಗೊತ್ತಿಲ್ಲದವನು ಟೀಕೆ ಮಾಡಿದರೆ ಅದಕ್ಕೆಲ್ಲ ನಾನು ಜಗ್ಗುವುದಿಲ್ಲ. ಅಂತಹ ಟೀಕೆಗಳಿಗೆ ಹೆದರುವ ಮಗ ನಾನಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೂರು ಬಾರಿ ಗೃಹ ಸಚಿವನಾಗಿ ಇಲಾಖೆಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ ಅನುಭವ ನನಗಿದೆ. ಇಲಾಖೆಯ ಆಗುಹೋಗುಗಳ ಬಗ್ಗೆ ಸಂಪೂರ್ಣ ಜ್ಞಾನವಿದ್ದು, ಯಾರೂ ನನಗೆ ಪಾಠ ಹೇಳಿಕೊಡುವ ಅಗತ್ಯವಿಲ್ಲ ಎಂದು ವಿಪಕ್ಷಗಳಿಗೆ ಬಿಸಿ ಮುಟ್ಟಿಸಿದರು.
ಪೊಲೀಸರಿಗೆ ಮನೆ ಕಟ್ಟಿಕೊಟ್ಟಿದ್ದು ನಾವು
ನಾನು ಗೃಹ ಸಚಿವನಾದ ಮೇಲೆ ಪೊಲೀಸ್ ಇಲಾಖೆಯಲ್ಲಿ ಮಹತ್ತರ ಬದಲಾವಣೆಗಳನ್ನು ತಂದಿದ್ದೇನೆ. ಪೊಲೀಸರ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸಿದ್ದೇನೆ. ಈಗಾಗಲೇ 40 ಸಾವಿರ ಮನೆಗಳನ್ನು ಪೊಲೀಸರಿಗಾಗಿ ನಿರ್ಮಿಸಿಕೊಟ್ಟಿದ್ದೇವೆ. ಅಷ್ಟೇ ಅಲ್ಲದೆ, ರಾಜ್ಯದ 1.10 ಲಕ್ಷ ಪೊಲೀಸ್ ಸಿಬ್ಬಂದಿಗೂ ವಸತಿ ಸೌಕರ್ಯ ಕಲ್ಪಿಸುವ ಗುರಿ ಹೊಂದಿದ್ದೇನೆ ಎಂದು ತಮ್ಮ ಸಾಧನೆಯನ್ನು ಸಚಿವರು ಎಳೆಎಳೆಯಾಗಿ ಬಿಚ್ಚಿಟ್ಟರು.
ಭಾಷಣದ ವೇಳೆ ಹಳೆಯ ನೆನಪೊಂದನ್ನು ಹಂಚಿಕೊಂಡ ಸಚಿವರು, ಲಂಡನ್ ಜಿಮ್ಖಾನಾ ಕ್ಲಬ್ ಗೆ ಹೋಗಬೇಕೆಂಬ ಆಸೆ ಇತ್ತು. ಅಲ್ಲಿಗೆ ಹೋಗಬೇಕೆಂದರೆ ಯಾವುದಾದರೂ ಪ್ರತಿಷ್ಠಿತ ಕ್ಲಬ್ ಸದಸ್ಯತ್ವ ಇರಬೇಕಿತ್ತು. ಹೀಗಾಗಿ ನಾನು ಹಲವು ವರ್ಷಗಳ ಹಿಂದೆ ಕೆಜಿಎಫ್ ಕ್ಲಬ್ ಸದಸ್ಯತ್ವ ಪಡೆದುಕೊಂಡಿದ್ದೆ. ಆದರೆ ಸದಸ್ಯತ್ವ ಪಡೆದರೂ ಲಂಡನ್ ಜಿಮ್ಖಾನಾ ಕ್ಲಬ್ ಗೆ ಹೋಗುವ ನನ್ನ ಆಸೆ ಮಾತ್ರ ಇನ್ನೂ ಈಡೇರಿಲ್ಲ ಎಂದು ವೇದಿಕೆಯಲ್ಲಿ ಸ್ಮರಿಸಿಕೊಂಡರು.








