ಕಾರ್ಕಳ: ಕರಾವಳಿಯ ಪ್ರಮುಖ ಪ್ರವಾಸಿ ತಾಣ ಹಾಗೂ ಹಿಂದುತ್ವದ ಆಸ್ಮಿತೆಯಂತಿರುವ ಕಾರ್ಕಳದ ಬೈಲೂರು ಉಮ್ಮಿಕಲ್ ಬೆಟ್ಟದಲ್ಲಿರುವ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ನಡೆದ ಕಳ್ಳತನ ಪ್ರಕರಣ ಕೇವಲ ಅಪರಾಧ ಕೃತ್ಯವಾಗಿ ಉಳಿಯದೆ, ಇದೀಗ ತೀವ್ರ ಸ್ವರೂಪದ ರಾಜಕೀಯ ತಿರುವು ಪಡೆದುಕೊಂಡಿದೆ. ಥೀಮ್ ಪಾರ್ಕ್‌ನ ಮೇಲ್ಛಾವಣಿಯ ತಾಮ್ರದ ಹೊದಿಕೆಗಳನ್ನು ಕದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುತ್ತಿದ್ದಂತೆಯೇ, ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಅಕ್ಷರಶಃ ಕೆಂಡಾಮಂಡಲವಾಗಿದ್ದಾರೆ. ಬಂಧಿತರನ್ನು ಕಾಂಗ್ರೆಸ್ ಬ್ರದರ್ಸ್ ಎಂದು ಜರೆಯುವ ಮೂಲಕ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.
ಕಾರ್ಕಳ ತಾಲೂಕಿನ ಎರ್ಲಪಾಡಿ ಗ್ರಾಮದ ಪರಶುರಾಮ ಥೀಮ್ ಪಾರ್ಕ್ ಕಟ್ಟಡಕ್ಕೆ ಜನವರಿ 3ರಂದು ನುಗ್ಗಿದ್ದ ದುಷ್ಕರ್ಮಿಗಳು, ಮುಖ್ಯ ಬಾಗಿಲನ್ನು ಮುರಿದು ಕಟ್ಟಡದ ಮೇಲ್ಛಾವಣಿಗೆ ಅಳವಡಿಸಲಾಗಿದ್ದ ಬೆಲೆಬಾಳುವ ತಾಮ್ರದ ಶೀಟ್‌ಗಳನ್ನು ಕಳವುಗೈದು ಪರಾರಿಯಾಗಿದ್ದರು. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು. ಪ್ರಕರಣದ ಗಂಭೀರತೆಯನ್ನು ಅರಿತ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ. (ಮತ್ತು ಹಿಂದಿನ ಎಸ್ಪಿ ಹರೀರಾಂ ಶಂಕರ ಅವರ ಮಾರ್ಗದರ್ಶನ) ನಿರ್ದೇಶನದಂತೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿತ್ತು.
ತನಿಖೆಯನ್ನು ಚುರುಕುಗೊಳಿಸಿದ ಕಾರ್ಕಳ ನಗರ ಪೊಲೀಸರು, ಉಡುಪಿ, ದಕ್ಷಿಣ ಕನ್ನಡ ಹಾಗೂ ಮಂಗಳೂರು ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಕರಾರುವಾಕ್ ಮಾಹಿತಿಯ ಮೇರೆಗೆ ಇಬ್ಬರು ಕುಖ್ಯಾತ ಕಳ್ಳರನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಕಳವಾರು ನಿವಾಸಿ ಆರೀಫ್ ಯಾನೆ ಮುನ್ನ (37) ಮತ್ತು ಕಾವೂರು ನಿವಾಸಿ ಅಬ್ದುಲ್ ಹಮೀದ್ (32) ಎಂದು ಗುರುತಿಸಲಾಗಿದೆ.
ಬಂಧಿತರಿಂದ ಸುಮಾರು 45,000 ರೂಪಾಯಿ ಮೌಲ್ಯದ 51 ಕೆ.ಜಿ ತಾಮ್ರದ ಶೀಟುಗಳು ಹಾಗೂ ಕೃತ್ಯಕ್ಕೆ ಬಳಸಲಾದ ವಾಹನ ಸೇರಿದಂತೆ ಒಟ್ಟು 2.18 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಶೇಷವೆಂದರೆ, ಬಂಧಿತ ಆರೋಪಿಗಳಿಬ್ಬರೂ ಹಳೆಯ ಕ್ರಿಮಿನಲ್ ಹಿನ್ನೆಲೆವುಳ್ಳವರಾಗಿದ್ದು, ಆರೀಫ್ ವಿರುದ್ಧ ಉಡುಪಿ, ಬ್ರಹ್ಮಾವರ, ಮೂಲ್ಕಿ ಸೇರಿದಂತೆ ವಿವಿಧ ಠಾಣೆಗಳಲ್ಲಿ 9ಕ್ಕೂ ಹೆಚ್ಚು ಪ್ರಕರಣಗಳಿದ್ದರೆ, ಅಬ್ದುಲ್ ಹಮೀದ್ ವಿರುದ್ಧ ಬಂಟ್ವಾಳ ಹಾಗೂ ಮೂಡಬಿದ್ರೆ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.
ಘಜ್ನಿ, ಘೋರಿ ವಂಶಸ್ಥರು: ಶಾಸಕ ಸುನಿಲ್ ಕುಮಾರ್ ಆಕ್ರೋಶ
ಆರೋಪಿಗಳ ಬಂಧನವಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್) ಮೂಲಕ ಪ್ರತಿಕ್ರಿಯಿಸಿರುವ ಶಾಸಕ ಹಾಗೂ ಮಾಜಿ ಸಚಿವ ವಿ. ಸುನಿಲ್ ಕುಮಾರ್, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಳ್ಳತನ ಮಾಡಿದವರು ಸಾಮಾನ್ಯ ಕಳ್ಳರಲ್ಲ, ಅವರು ಭಾರತದ ಇತಿಹಾಸದಲ್ಲಿ ದೇವಾಲಯಗಳನ್ನು ಲೂಟಿ ಮಾಡಿದ ಆಕ್ರಮಣಕಾರರ ವಂಶಸ್ಥರು ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಶಾಸಕರು ತಮ್ಮ ಟ್ವೀಟ್‌ನಲ್ಲಿ, ಪರಶುರಾಮ ಥೀಂ ಪಾರ್ಕ್ ಮೇಲ್ಛಾವಣಿ ಕದ್ದವರು ಕಾಂಗ್ರೆಸ್ ಬ್ರದರ್ಸ್ ಹಿಂದೆ ಭಾರತದ ಶ್ರದ್ಧಾ ಕೇಂದ್ರಗಳನ್ನು ಘಜ್ನಿ, ಘೋರಿ, ಖಿಲ್ಜಿ ಮತ್ತು ಮೊಘಲರು ಹೇಗೆ ಒಡೆದು ಹಾಳುಮಾಡಿದ್ದರೋ, ಅದೇ ರೀತಿಯಲ್ಲಿ ಥೀಂ ಪಾರ್ಕ್ ಮೇಲ್ಛಾವಣಿ ಕದ್ದವರು ಅವರ ವಂಶಸ್ಥರೇ ಆಗಿದ್ದಾರೆ ಎಂದು ಇತಿಹಾಸದ ಪುಟಗಳನ್ನು ಉಲ್ಲೇಖಿಸಿ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಓಲೈಕೆ ರಾಜಕಾರಣದ ವಿರುದ್ಧ ಗುಡುಗು
ತಮ್ಮ ಆಕ್ರೋಶವನ್ನು ಮುಂದುವರಿಸಿದ ಸುನಿಲ್ ಕುಮಾರ್, ಕರಾವಳಿಯಲ್ಲಿ ಪರಶುರಾಮನ ಹೆಜ್ಜೆ ಗುರುತು ಇರಲೇಬಾರದು ಎಂಬ ದುರುದ್ದೇಶದಿಂದ ಕಾಂಗ್ರೆಸ್ ಸರ್ಕಾರ ಥೀಮ್ ಪಾರ್ಕ್ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದೆ. ಈಗ ನಿಮ್ಮ ಮತ ಬ್ಯಾಂಕ್ ನ ಪುಂಡರು ಇಲ್ಲಿ ಕಳ್ಳತನ ಮಾಡುವ ಧೈರ್ಯ ತೋರಿದ್ದಾರೆ. ಇವರಿಗೆ ಇಷ್ಟೊಂದು ಧೈರ್ಯ ಎಲ್ಲಿಂದ ಬಂತು? ಇದು ಕಾಂಗ್ರೆಸ್‌ನ ಹಿಂದೂ ವಿರೋಧಿ ನಿಲುವು ಮತ್ತು ಓಲೈಕೆ ರಾಜಕಾರಣದ ಫಲವಲ್ಲವೇ? ಏನು ಬೇಕಾದರೂ ಮಾಡಿ, ನಾವಿದ್ದೇವೆ ಎಂಬ ನಿಮ್ಮ ಸರ್ಕಾರದ ಪರೋಕ್ಷ ಬೆಂಬಲವೇ ಇದಕ್ಕೆ ಕಾರಣ ಎಂದು ನೇರ ಆರೋಪ ಮಾಡಿದ್ದಾರೆ.
ಇಂದು ಜನರ ಭಾವನೆಗಳಿಗೆ ಘಾಸಿ ಮಾಡಿರುವುದರ ಜೊತೆಗೆ ಪ್ರವಾಸೋದ್ಯಮಕ್ಕೂ ಅಡ್ಡಿಪಡಿಸಿದ್ದೀರಿ. ಆದರೆ ನೆನಪಿರಲಿ, ಪರಶುರಾಮ ಥೀಮ್ ಪಾರ್ಕ್ ಮುಂದಿನ ಚುನಾವಣೆಯ ವರೆಗಲ್ಲ, ಶತಶತಮಾನಗಳವರೆಗೂ ಸ್ಥಾಯಿಯಾಗಿರುತ್ತದೆ. ಈ ಪವಿತ್ರ ಕ್ಷೇತ್ರಕ್ಕೆ ಅಪಚಾರ ಬಗೆದ ಕ್ಷಣದಿಂದಲೇ ಕಾಂಗ್ರೆಸ್ ಅಧಃಪತನದ ಕ್ಷಣಗಣನೆ ಪ್ರಾರಂಭವಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪರಶುರಾಮ ಥೀಮ್ ಪಾರ್ಕ್‌ನಲ್ಲಿ ನಡೆದ ಕಳ್ಳತನ ಪ್ರಕರಣವು ಕೇವಲ ಕಾನೂನು ಸುವ್ಯವಸ್ಥೆಯ ವಿಷಯವಾಗಿ ಉಳಿಯದೆ, ಕರಾವಳಿ ಭಾಗದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.








