ಬಾಗಲಕೋಟೆಯ ಇಳಕಲ್ ಪಟ್ಟಣದಲ್ಲಿ ಪಾರ್ಸೆಲ್ ತೆರೆದು, ಸ್ವಿಚ್ ಆನ್ ಮಾಡಿದ ಕೂಡಲೇ ಬ್ಲಾಸ್ಟ್ ಆದ ಘಟನೆ ಬೆಳಕಿಗೆ ಬಂದಿದೆ. ಮುಂಜಾನೆ 10 ಗಂಟೆಯ ಸುಮಾರಿನಲ್ಲಿ, ಮೃತ ಯೋಧನ ಪತ್ನಿ ಬಸಮ್ಮ ಅವರ ಮನೆಗೆ ಬಂದಿದ್ದ ಪಾರ್ಸೆಲ್ ನಲ್ಲಿದ್ದ ಹೇರ್ ಡ್ರೈಯರ್ ಸ್ಪೋಟಗೊಂಡು, ಬೆರಳುಗಳನ್ನು ಛಿದ್ರಗೊಳಿಸಿದೆ.
ಶನಿವಾರ ಬೆಳಿಗ್ಗೆ, ಬಸಮ್ಮ ಅವರ ಮನೆಗೆ ಪಾರ್ಸೆಲ್ ತಲುಪಿತು. ಶಶಿಕಲಾ ಎನ್ನುವವರ ಹೆಸರಿನಲ್ಲಿ ಬಂದಿದ್ದ ಈ ಪಾರ್ಸೆಲ್ ಅನ್ನು ಅವರ ಸ್ನೇಹಿತೆ ಬಸಮ್ಮ ಎನ್ನುವವರು ತೆಗೆದುಕೊಂಡಿದ್ದರು. ಪಾರ್ಸೆಲ್ ತೆರೆದು, ಅದರಲ್ಲಿದ್ದ ಹೇರ್ ಡ್ರೈಯರ್ ಅನ್ನು ಎಲೆಕ್ಟ್ರಿಕ್ ಪ್ಲಗ್‌ಗೆ ಜೋಡಿಸಿ ಸ್ವಿಚ್ ಆನ್ ಮಾಡಿದ ಕೂಡಲೇ ಸ್ಫೋಟ ಸಂಭವಿಸಿದೆ.
ಶಶಿಕಲಾ ಎಂಬ ಮಹಿಳೆಯ ಹೆಸರಿಗೆ ಕೊರಿಯರ್ ಮೂಲಕ ಹೇರ್ ಡ್ರೈಯರ್ ಪಾರ್ಸೆಲ್ ಬಂದಿದ್ದು, ಕೊರಿಯರ್ ಸಿಬ್ಬಂದಿ ಶಶಿಕಲಾ ಅವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಪಾರ್ಸಲ್ ಕಲೆಕ್ಟ್ ಮಾಡುವಂತೆ ಹೇಳಿದ್ದಾರೆ. ಆದರೆ ಶಶಿಕಲಾ ನಾನು ಬೇರೆ ಊರಿನಲ್ಲಿದ್ದೇನೆ ಎಂದು ಹೇಳಿದರೂ ಕೊರಿಯರ್ ಸಿಬ್ಬಂದಿ ಪದೇ ಪದೇ ಕರೆ ಮಾಡುವ ಮೂಲಕ ಶಶಿಕಲಾ ಅವರನ್ನು ಕಾಡಿದರು. ಅಂತಿಮವಾಗಿ ತನ್ನ ಸ್ನೇಹಿತೆ ಬಸಮ್ಮ ಅವರಿಗೆ ಕರೆ ಮಾಡಿ, ನನ್ನ ಹೆಸರಿಗೆ ಒಂದು ಪಾರ್ಸೆಲ್ ಬಂದಿದೆ. ನೀವೇ ಕಲೆಕ್ಟ್ ಮಾಡಿ ಎಂದು ವಿನಂತಿಸಿದರು.
ಬಸಮ್ಮ ಪಾರ್ಸೆಲ್ ತೆಗೆದುಕೊಂಡು ಮನೆಗೆ ಬಂದಾಗ, ಪಕ್ಕದ ಮನೆಯವರು ಕುತೂಹಲದಿಂದ, ಕೆಲಸ ಮಾಡುತ್ತದೆಯೇ ಎಂದು ನೋಡೋಣ? ಸ್ವಿಚ್ ಆನ್ ಮಾಡಿ ಎಂದು ಸಲಹೆ ನೀಡಿದರು. ಹೇರ್ ಡ್ರೈಯರ್‌ನ ಸ್ವಿಚ್ ಆನ್ ಮಾಡಿದ ತಕ್ಷಣ, ಭೀಕರ ಸ್ಫೋಟ ಸಂಭವಿಸಿದೆ.
ಸ್ಫೋಟದ ಪರಿಣಾಮ, ಬಸಮ್ಮನ ಎರಡು ಕೈಗಳ ಬೆರಳುಗಳು ಛಿದ್ರಗೊಂಡಿದ್ದು, ನೆರೆಹೊರೆಯವರು ಸ್ಥಳಕ್ಕೆ ಧಾವಿಸಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ಅಸ್ಪತ್ರೆಯಲ್ಲಿ ತೀವ್ರವಾಗಿ ಗಾಯಗೊಂಡ ಕೈಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಯ ನಂತರ ಇಳಕಲ್ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಯಿತು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪಾರ್ಸೆಲ್ ಮೂಲ ಹುಡುಕಲು ಕಾರ್ಯಾಚರಣೆ ಆರಂಭಿಸಿದ್ದಾರೆ.
ಈ ಘಟನೆಯು ಹಲವಾರು ಅನುಮಾನಗಳನ್ನು ಹುಟ್ಟುಹಾಕಿದ್ದು, ಘಟನೆಗೆ ಸಂಬಂಧಿಸಿದಂತೆ ಕುಶಲತಜ್ಞರ ತಂಡವನ್ನು ಸ್ಥಳಕ್ಕೆ ಕರೆಸಲಾಗಿದೆ. ಪಾರ್ಸೆಲ್‌ನಲ್ಲಿ ಬಳಕೆಯಾದ ವಸ್ತುಗಳು ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಇದೊಂದು ಪ್ಲಾನ್ಡ್ ಅಟ್ಯಾಕ್ ಎಂದು ಅನುಮಾನಿಸಲಾಗಿದೆ. ಇತ್ತೀಚೆಗೆ ಇಳಕಲ್ ಪಟ್ಟಣದಲ್ಲಿ ಒಂದೇ ರೀತಿಯ ಪಾರ್ಸೆಲ್ ಸ್ಫೋಟ ಪ್ರಕರಣಗಳು ದಾಖಲಾಗಿರುವುದರಿಂದ, ಭಯದ ವಾತಾವರಣ ಉಂಟಾಗಿದೆ.