ಬೆಂಗಳೂರು: ಶತಮಾನದ ಇತಿಹಾಸವಿರುವ ಕಾಂಗ್ರೆಸ್ ಪಕ್ಷವು ಹಿಂದೆ 415 ಸಂಸದರನ್ನು ಹೊಂದುವ ಮೂಲಕ ಇಡೀ ದೇಶದಲ್ಲಿ ಏಕಚಕ್ರಾಧಿಪತ್ಯ ಸಾಧಿಸಿತ್ತು. ಆದರೆ ಇಂದು ಕೇವಲ 99 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳುವ ಹೀನಾಯ ಸ್ಥಿತಿಗೆ ತಲುಪಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿಧಾನಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಇದೇ ವೇಳೆ, ವಿಜಯೇಂದ್ರ ಅವರ ಭಾಷಣದ ಬೆನ್ನಲ್ಲೇ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪರೋಕ್ಷವಾಗಿ ಸ್ವಪಕ್ಷದ ಹಿಂದಿನ ರಾಜ್ಯ ಆಡಳಿತದ ವಿರುದ್ಧವೇ ಚಾಟಿ ಬೀಸುವ ಮೂಲಕ ಗಮನ ಸೆಳೆದರು.
ವಿಧಾನಸಭೆಯ ಕಲಾಪದಲ್ಲಿ ಮಾತನಾಡಿದ ವಿಜಯೇಂದ್ರ ಅವರು, ಕಾಂಗ್ರೆಸ್ ಪಕ್ಷದ ಹಿಂದಿನ ವೈಭವ ಮತ್ತು ಇಂದಿನ ವಾಸ್ತವ ಸ್ಥಿತಿಯ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟರು. 1961ರಲ್ಲಿ 364 ಸಂಸದರನ್ನು ಹೊಂದಿದ್ದ ಕಾಂಗ್ರೆಸ್, 1984ರ ವೇಳೆಗೆ 415 ಸಂಸದರ ಬಲವನ್ನು ಹೊಂದಿತ್ತು. ಅಂತಹ ಬಲಿಷ್ಠ ಪಕ್ಷ ಇಂದು ನೂರರ ಗಡಿ ದಾಟಲಾಗದೆ ಪರದಾಡುತ್ತಿದೆ. ಈ ಅದಃಪತನಕ್ಕೆ ಕಾರಣವೇನು ಎಂಬುದನ್ನು ಆಡಳಿತ ಪಕ್ಷದವರು ಒಂದು ಕ್ಷಣ ನಿಂತು ಯೋಚಿಸಬೇಕಿದೆ ಎಂದು ಕಿವಿಮಾತು ಹೇಳಿದರು.
ಕಾಂಗ್ರೆಸ್ ಪಕ್ಷದ ವಿರುದ್ಧ ಕಟುವಾದ ಪದಗಳನ್ನು ಬಳಸಿದ ವಿಜಯೇಂದ್ರ, ರಾವಣನು ಸೀತೆಯನ್ನು ಅಪಹರಿಸಿ ಲಂಕೆಗೆ ಒಯ್ದಂತೆ, ಇಂದಿನ ಕಾಂಗ್ರೆಸ್ಸಿಗರು ಮಹಾತ್ಮ ಗಾಂಧಿಯವರ ಹೆಸರನ್ನು ಅಪಹರಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಗಾಂಧೀಜಿಯವರ ತತ್ತ್ವಗಳನ್ನು ಗಾಳಿಗೆ ತೂರಿ, ಕೇವಲ ಅವರ ಹೆಸರನ್ನು ಬಳಸಿಕೊಂಡು ಮಹಾತ್ಮರಿಗೂ ಟೋಪಿ ಹಾಕುವ ಕೆಲಸವನ್ನು ಈ ನಕಲಿ ಕಾಂಗ್ರೆಸ್ ಮಾಡುತ್ತಿದೆ ಎಂದು ಟೀಕಿಸಿದರು. ಬಡತನ ನಿರ್ಮೂಲನೆ ಮಾಡುತ್ತೇವೆ, ಗರೀಬಿ ಹಠಾವೋ ಎಂದು ಘೋಷಣೆ ಕೂಗುತ್ತಲೇ ದೇಶದ ಬಡವರಿಗೆ ಮಕ್ಮಲ್ ಟೋಪಿ ಹಾಕಿದ ಪರಿಣಾಮವೇ ಇಂದು ಕಾಂಗ್ರೆಸ್ ಪಕ್ಷಕ್ಕೆ ಈ ದುಸ್ಥಿತಿ ಬಂದಿದೆ ಎಂದು ವಿಶ್ಲೇಷಿಸಿದರು.
ಯುಪಿಎ ಅವಧಿಯ ಆಡಳಿತವನ್ನು ನೆನಪಿಸಿದ ಅವರು, ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ದೇಶದಲ್ಲಿ ಅಭಿವೃದ್ಧಿಯ ಚರ್ಚೆಗಿಂತ ಹೆಚ್ಚಾಗಿ 2ಜಿ ಹಗರಣ, ಕಲ್ಲಿದ್ದಲು ಹಗರಣ ಮತ್ತು ಕಾಮನ್‍ವೆಲ್ತ್ ಗೇಮ್ಸ್ ಹಗರಣಗಳಂತಹ ಭ್ರಷ್ಟಾಚಾರದ ಚರ್ಚೆಗಳೇ ನಡೆಯುತ್ತಿದ್ದವು. ಆದರೆ, 2014ರಲ್ಲಿ ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡ ನಂತರ ದೇಶದ ಚಿತ್ರಣವೇ ಬದಲಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರದ ವಿರುದ್ಧ ಒಂದೇ ಒಂದು ಭ್ರಷ್ಟಾಚಾರದ ಆರೋಪ ಮಾಡಲು ಕಾಂಗ್ರೆಸ್ಸಿಗರಿಗೆ ಸಾಧ್ಯವಾಗಿಲ್ಲ. ಇದು ಬಿಜೆಪಿ ಆಡಳಿತದ ಪಾರದರ್ಶಕತೆಗೆ ಸಾಕ್ಷಿ ಎಂದು ಸಮರ್ಥಿಸಿಕೊಂಡರು.
ರಾಜ್ಯದಿಂದ ಕೇಂದ್ರಕ್ಕೆ ಹೋಗುವ ತೆರಿಗೆ ಹಣದ ಬಗ್ಗೆ ಕಾಂಗ್ರೆಸ್ ನಾಯಕರು ಮಾಡುತ್ತಿರುವ ಟೀಕೆಗಳನ್ನು ವಿಜಯೇಂದ್ರ ತಳ್ಳಿಹಾಕಿದರು. ಜಿಎಸ್‍ಟಿ ಹೆಸರಿನಲ್ಲಿ ಕೇಂದ್ರ ಸರ್ಕಾರ ರಾಜ್ಯವನ್ನು ಲೂಟಿ ಮಾಡುತ್ತಿದೆ ಎಂಬ ಮಾತುಗಳು ಅರ್ಥಹೀನ. ಕೇಂದ್ರ ಸರ್ಕಾರವು ಸಂಗ್ರಹಿಸಿದ ಹಣವನ್ನು ದೇಶದ ಮೂಲಭೂತ ಸೌಕರ್ಯ, ರಕ್ಷಣೆ ಮತ್ತು ಉದ್ಯೋಗ ಸೃಷ್ಟಿಗೆ ಬಂಡವಾಳವಾಗಿ ಹೂಡಿಕೆ ಮಾಡುತ್ತಿದೆ. ರಾಷ್ಟ್ರ ಮೊದಲು ಎಂಬ ಚಿಂತನೆಯಡಿ ಬಲಿಷ್ಠ ಭಾರತ ನಿರ್ಮಾಣವಾಗುತ್ತಿದೆ ಎಂದರು.
ವಿಕಸಿತ ಭಾರತದತ್ತ ದಾಪುಗಾಲು
ಮೋದಿಯವರ ಆಡಳಿತದಲ್ಲಿ ದೇಶದ ಅಭಿವೃದ್ಧಿ ವೇಗ ಪಡೆದುಕೊಂಡಿದೆ. ರಕ್ಷಣಾ ಬಜೆಟ್ ಹೆಚ್ಚಳವಾಗಿದೆ, ಹೆದ್ದಾರಿಗಳ ನಿರ್ಮಾಣ ಭರದಿಂದ ಸಾಗುತ್ತಿದೆ. 2014ರಿಂದ ಇಲ್ಲಿಯವರೆಗೆ 2 ಲಕ್ಷಕ್ಕೂ ಅಧಿಕ ಸ್ಟಾರ್ಟಪ್‍ಗಳಿಗೆ ಅವಕಾಶ ಸಿಕ್ಕಿದ್ದು, ಯೂನಿಕಾರ್ನ್ ಕಂಪನಿಗಳ ಮೂಲಕ 16.6 ಲಕ್ಷ ನೇರ ಉದ್ಯೋಗ ಸೃಷ್ಟಿಯಾಗಿದೆ. 60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಕೇವಲ ಶೇ. 17 ರಷ್ಟು ಗ್ರಾಮೀಣ ಜನರಿಗೆ ಕುಡಿಯುವ ನೀರು ನೀಡಿತ್ತು. ಆದರೆ ಮೋದಿ ಸರ್ಕಾರ ಶೇ. 74 ರಷ್ಟು ಜನರಿಗೆ ನೀರು ಮತ್ತು 12 ಕೋಟಿ ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿದೆ ಎಂದು ಅಂಕಿಅಂಶಗಳ ಸಹಿತ ವಿವರಿಸಿದರು. ಅಲ್ಲದೆ, ದೇಶದ ಆಂತರಿಕ ಭದ್ರತೆ ಸುಧಾರಿಸಿದ್ದು, ನಕ್ಸಲಿಸಂ ಹಾವಳಿ ಗಣನೀಯವಾಗಿ ತಗ್ಗಿದೆ ಎಂದು ಪ್ರತಿಪಾದಿಸಿದರು.
ವಿಜಯೇಂದ್ರಗೆ ಪರೋಕ್ಷವಾಗಿ ಟಾಂಗ್ ನೀಡಿದ ಯತ್ನಾಳ್
ವಿಜಯೇಂದ್ರ ಅವರು ಕೇಂದ್ರ ಸರ್ಕಾರದ ಸಾಧನೆಗಳನ್ನು ಮತ್ತು ಮೋದಿಯವರ ಭ್ರಷ್ಟಾಚಾರ ರಹಿತ ಆಡಳಿತವನ್ನು ಕೊಂಡಾಡುತ್ತಿದ್ದಂತೆಯೇ, ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎದ್ದುನಿಂತು ನೀಡಿದ ಹೇಳಿಕೆ ಸದನದಲ್ಲಿ ಸಂಚಲನ ಮೂಡಿಸಿತು.
ಮೋದಿ ಸರ್ಕಾರವನ್ನು ಹೊಗಳುತ್ತಿರುವ ನೀವು, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರವನ್ನು ತಡೆಯಲು ಏನು ಮಾಡಿದ್ದೀರಿ? ಎಂದು ಪರೋಕ್ಷವಾಗಿ ವಿಜಯೇಂದ್ರ ಅವರಿಗೆ ತಿರುಗೇಟು ನೀಡಿದರು. ನಮ್ಮ ರಾಜ್ಯದ ಬಿಜೆಪಿ ಸರ್ಕಾರವಿದ್ದಾಗ ಭ್ರಷ್ಟಾಚಾರವನ್ನು ನಿಯಂತ್ರಣ ಮಾಡಿದ್ದರೆ ಇಂದು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿರಲಿಲ್ಲ. ನಾವು ಭ್ರಷ್ಟಾಚಾರದಲ್ಲಿ ತೊಡಗಿದ್ದರಿಂದಲೇ ಜನ ನಮ್ಮನ್ನು ತಿರಸ್ಕರಿಸಿದರು ಎಂಬ ಅರ್ಥದಲ್ಲಿ ಯತ್ನಾಳ್ ಅವರು ಸ್ವಪಕ್ಷದ ಹಿಂದಿನ ಆಡಳಿತದ ವಿರುದ್ಧವೇ ಚಾಟಿ ಬೀಸಿದರು. ಇದು ಆಡಳಿತ ಪಕ್ಷದ ಸದಸ್ಯರಲ್ಲಿ ನಗು ತರಿಸಿದರೆ, ಬಿಜೆಪಿ ಪಾಳಯದಲ್ಲಿ ಮುಜುಗರ ಉಂಟುಮಾಡಿತು.








