ಮಾಸ್ಕ್ ಧರಿಸದ ವಿಮಾನ ಪ್ರಯಾಣಿಕರನ್ನ ಮುಲಾಜಿಲ್ಲದೆ ಕೆಳಗಿಳಿಸಿ – DGCA ಆದೇಶ..
ಮಾಸ್ಕ್ ಧರಿಸದ ಪ್ರಯಾಣಿಕನನ್ನು ಮುಲಾಜಿಲ್ಲದೇ ಕೆಳಿಗಿಳಿಸಿ ಎಂದು ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಖಡಕ್ ಎಚ್ಚರಿಕೆ ನೀಡಿದೆ. ದೇಶದಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚಳ ಆಗುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಮಾಸ್ಕ್ ಧರಿಸುವುದಕ್ಕೆ ಒತ್ತು ನೀಡಿದ್ದು, ಕೋವಿಡ್ ನಿಯಮಗಳನ್ನ ಕಟ್ಟು ನಿಟ್ಟಾಗಿ ಪಾಲಿಸಲು ಆದೇಶ ಹೊರಡಿಸಿದೆ.
“ವಿಮಾನಯಾನ ಸಂಸ್ಥೆಯು ಹೆಚ್ಚುವರಿ ಮಾಸ್ಕ್ ಗಳಿಗೆ ವ್ಯವಸ್ಥೆ ಮಾಡುತ್ತದೆ ಅಗತ್ಯವಿದ್ದರೆ ಅವುಗಳನ್ನು ಪ್ರಯಾಣಿಕರಿಗೆ ಒದಗಿಸುತ್ತದೆ. ಎಚ್ಚರಿಕೆ ನೀಡಿದ ನಂತರವೂ ಯಾವುದೇ ಪ್ರಯಾಣಿಕರು ಮೇಲಿನ ಸೂಚನೆಗಳಿಗೆ ಬದ್ಧವಾಗಿಲ್ಲದಿದ್ದರೆ, ಅಂಥವಹರನ್ನ ಅಗತ್ಯವಿದ್ದರೆ, ಅವನನ್ನು/ಅವಳನ್ನು ಡಿ-ಬೋರ್ಡಿಂಗ್ ಮಾಡಬೇಕು ಎಂದು ವಿಮಾನಯಾನ ಸಂಸ್ಥೆ ಖಚಿತಪಡಿಸುತ್ತದೆ, ”ಡಿಜಿಸಿಎ ಸುತ್ತೋಲೆಯಲ್ಲಿ ತಿಳಿಸಿದೆ.
ಕಳೆದ ಶುಕ್ರವಾರ ದೆಹಲಿ ಹೈಕೋರ್ಟ್‌ನ ದ್ವಿಸದಸ್ಯ ಪೀಠವು, ಮಾಸ್ಕ್‌ಗಳನ್ನು ಕಡ್ಡಾಯವಾಗಿ ಧರಿಸುವುದು ಮತ್ತು ವಿಮಾನ ನಿಲ್ದಾಣಗಳಲ್ಲಿ ಮತ್ತು ವಿಮಾನಗಳಲ್ಲಿ ನೈರ್ಮಲ್ಯವನ್ನು ಕಾಪಾಡುವುದು ಮುಂತಾದ ಕೋವಿಡ್ ಮಾನದಂಡಗಳನ್ನು ಉಲ್ಲಂಘಿಸುವ ಪ್ರಯಾಣಿಕರನ್ನು ಡಿ-ಬೋರ್ಡಿಂಗ್ ಸೇರಿದಂತೆ ಕಠಿಣ ಕ್ರಮಕ್ಕೆ ಕೋರ್ಟ್ ಆದೇಶಿಸಿತ್ತು. ಆ ನಂತರ ಡಿಜಿಸಿಎ ನಿರ್ದೇಶನ ಬಂದಿದೆ.








