ನವದೆಹಲಿ: ವಿಶ್ವದಾದ್ಯಂತ ಕೊರೊನಾ 8 ಸಾವಿರಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದುಕೊಂಡಿದೆ. ಮತ್ತೊಂದೆಡೆ ಕೊರೊನಾ ಸೋಂಕಿತರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ. 40ಕ್ಕೂ ಅಧಿಕ ರಾಷ್ಟ್ರಗಳಿಗೆ ತಲೆನೋವಾಗಿರುವ ಕೊರೋನಾ ವೈರಸ್ ರೋಗಕ್ಕೆ ಔಷಧಿ ಕಂಡುಹಿಡಿಯಲು ವಿಶ್ವಾದ್ಯಂತ ವಿಜ್ಞಾನಿಗಳು ಹರಸಾಹಸ ಪಡುತ್ತಿದ್ದು, ಸೂಕ್ತ ಔಷಧಿಗಾಗಿ ವೈದ್ಯರು ಪರದಾಡುತ್ತಿದ್ದಾರೆ. ಇದರ ನಡುವೆ ಯೋಗ ಗುರು ಬಾಬಾ ರಾಮ್ ದೇವ್, ಕೊರೊನಾ ವೈರಸ್ ಗೆ ಪತಂಜಲಿ ಸಂಸ್ಥೆಯ ಬಳಿ ಔಷಧಿ ಇದೆ ಎಂದು ಹೇಳಿಕೊಂಡಿದ್ದಾರೆ.
ತಮ್ಮ ಪತಂಜಲಿ ಸಂಸ್ಥೆಯ ಅಶ್ವಗಂಧ ಉತ್ಪನ್ನದ ಜಾಹೀರಾತಿನಲ್ಲಿ ಮಾತನಾಡಿರುವ ಅವರು, ಕೊರೋನಾ ವೈರಸ್ ಸೇರಿದಂತೆ ವಿವಿಧ ಮಾರಣಾಂತಿಕ ವೈರಸ್ ಗಳಿಗೆ ಆಯುರ್ವೇದದಲ್ಲಿ ಔಷಧಿಯಿದೆ. ವೈಜ್ಞಾನಿಕವಾಗಿ ಸಂಶೋಧನೆಯನ್ನೂ ಮಾಡಿದ್ದೇವೆ. ಕೊರೋನಾ ರೋಗಕ್ಕೆ ಅಶ್ವಗಂಧ ಮದ್ದೆಂಬುದು ವೈಜ್ಞಾನಿಕ ಸಂಶೋಧನೆಯಲ್ಲಿ ಸಾಬೀತಾಗಿದೆ ಎಂದು ಹೇಳಿದ್ದಾರೆ.
ವೈದ್ಯ ಲೋಕ ಅಸಮಾಧಾನ
ಕೊರೊನಾಗೆ ಪತಂಜಲಿ ಮದ್ದೆಂದ್ದ ರಾಮ್ ದೇವ್ ಹೇಳಿಕೆಗೆ ಇದೀಗ ವೈದ್ಯ ಲೋಕ ಅಸಮಾಧಾನ ವ್ಯಕ್ತಪಡಿಸಿದ್ದು, ‘ಇಂಥಹ ಹೇಳಿಕೆಗಳು ಜನರಲ್ಲಿ ನಕಲಿ ಭದ್ರತಾ ಭಾವನೆ ಸೃಷ್ಟಿಸುತ್ತದೆ. ಹೆಚ್ಚು ಶಿಕ್ಷಿತರಲ್ಲದ ಜನರು ಇಂಥ ಜಾಹೀರಾತಿಗೆ ಮರುಳಾಗುತ್ತಾರೆ. ಈ ರೀತಿಯ ಜಾಹೀರಾತುಗಳನ್ನು ಸರ್ಕಾರ ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ.