ತಮಿಳುನಾಡಿನ ಕೊಯಮತ್ತೂರ್ನಲ್ಲಿ ಹಿಂದೂ ಮುನ್ನಣಿ ಕಚೇರಿ ಮೇಲೆ ಅಪರಿಚಿತ ವ್ಯಕ್ತಿಗಳು ಪೆಟ್ರೋಲ್ ಬಾಂಬ್ ಎಸೆದು ಪರಾರಿಯಾಗಿದ್ದಾರೆ. ಇದರಿಂದ ಸಿಟಿಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಮೊನ್ನೆಯಷ್ಟೆ ಇಲ್ಲಿನ ಮಸೀದಿ ಮೇಲೆ ದಾಳಿ ನಡೆದಿತ್ತು.
ಈ ಘಟನೆ ಬಳಿಕ ಮನೆಗೆ ಹಿಂತಿರುಗುತ್ತಿದ್ದ ಹಿಂದೂ ಮುನ್ನಣಿ ಸಂಘಟನೆಯ ಕಾರ್ಯಕರ್ತನ ಮೇಲೂ ಅಪರಿಚತರು ದಾಳಿ ಮಾಡಿದ್ದರು. ಹಾಗಾಗಿ ಹಿಂದೂ ಮುನ್ನಣಿ ಸಂಘಟನೆ ಮತ್ತು ಮುಸ್ಲಿಂ ಸಂಘಟನೆಗಳು ಕೊಯಮತ್ತೂರು ಬಂದ್ಗೆ ಕರೆ ನೀಡಿದ್ದವು. ಅದ್ದರಿಂದ ಹಿಂದೂ ಮುನ್ನಣಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ ಮಾಡಿ ಪ್ರತೀಕಾರದ ತೀರಿಸಿಕೊಂಡಿರಬಹುದು ಎಂಬ ಶಂಕೆ ಮೂಡಿದೆ.
ನಿನ್ನೆ ತಡರಾತ್ರಿ ಈ ದುಷ್ಕೃತ್ಯ ನಡೆದಿದೆ. ಇಂದು ಬೆಳಗ್ಗೆ ೧೦ ಗಂಟೆಗೆ ಸಿಬ್ಬಂದಿ ಕಚೇರಿ ಬಾಗಿಲು ತೆರೆದಾಗ ಬಾಟಲ್ನ ಚೂರುಗಳು ಸಿಕ್ಕ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಬಾಲಾಜಿ ಶರವಣನ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ತನಿಖೆ ಶುರು ಮಾಡಿದ್ದಾರೆ. ಆರೋಪಿಗಳ ಪತ್ತೆಗಾಗಿ ಸುತ್ತಮುತ್ತಲಿನ ಕಣ್ಗಾವಲು ಕ್ಯಾಮೆರಾಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಮಾರ್ಚ್ ೬ರಂದು ಮಸೀದಿ ಮೇಲೆ ನಡೆದಿದ್ದ ದಾಳಿ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಕೋರ್ಟ್ಗೆ ಹಾಜರು ಪಡಿಸಿದ್ದರು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.







