ಬೆಂಗಳೂರು: ಮಾಜಿ ಸಿಎಂ ಎಸ್.ಎಂ. ಕೃಷ್ಣ ನಿಧನರಾಗಿದ್ದು, ನಟಿ ರಮ್ಯಾ (Ramya) ಅವರು ಸದಾಶಿವನಗರಕ್ಕೆ ಆಗಮಿಸಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಸುದ್ದಿಗಾರರು ಮಾತನಾಡಿಸಿದಾಗ ಈ ವೇಳೆ ನಾನು ಮಾತನಾಡುವ ಸ್ಥಿತಿಯಲ್ಲಿ ಇಲ್ಲ ಎಂದಿದ್ದಾರೆ. ರಮ್ಯಾ ಅವರನ್ನು ರಾಜಕಾರಣಕ್ಕೆ (Politics) ಕರೆತಂದಿದ್ದೆ ಎಸ್ಎಂಕೆ. ಈ ಕಾರಣದಿಂದ ಹಲವಾರು ಬಾರಿ ರಮ್ಯಾ ಅವರು ಎಸ್.ಎಂ.ಕೆ ನಿವಾಸಕ್ಕೆ ತೆರಳಿ ಮಾತನಾಡಿ ಸಲಹೆಗಳನ್ನು ಪಡೆಯುತ್ತಿದ್ದರು.
ಎಸ್.ಎಂ.ಕೃಷ್ಣ ಅವರ ನೇತೃತ್ವದಲ್ಲೇ ರಾಜಕಾರಣಕ್ಕೆ ಕಾಲಿಟ್ಟ ರಮ್ಯಾ ಅವರು ಕಾಂಗ್ರೆಸ್ ಪಕ್ಷದಲ್ಲಿ ಅತ್ಯಂತ ಶೀಘ್ರವಾಗಿ ಬೆಳೆದರು. ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿ ಹೈಕಮಾಂಡ್ನ ಪ್ರಭಾವಶಾಲಿ ನಾಯಕರ ಜೊತೆ ನೇರವಾಗಿ ಸಂಪರ್ಕ ಸಾಧಿಸಬಲ್ಲ ರಾಜ್ಯದ ಕೆಲವೇ ಕಾಂಗ್ರೆಸ್ಸಿಗರಲ್ಲಿ ರಮ್ಯಾ ಕೂಡ ಒಬ್ಬರಾಗಿದ್ದರು. ಕೃಷ್ಣ ಅವರ ಮಾರ್ಗದರ್ಶನದಲ್ಲೇ ರಾಜಕೀಯ ನಡೆಗಳನ್ನು ಇಟ್ಟವರು.