ಪ್ರತಿಷ್ಠಿತ ಕಾನ್ ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ರಿಷಬ್ ಶೆಟ್ಟಿ ಫಿಲಂಸ್ ಬ್ಯಾನರ್ ನಲ್ಲಿ ನಟೇಶ್ ಹೆಗ್ಡೆ ನಿರ್ದೇಶನದ ‘ಪೆಡ್ರೋ’ ಸಿನಿಮಾ ಆಯ್ಕೆಯಾಗಿದೆ. ಕಾನ್ ಸಿನಿಮೋತ್ಸವದ ಶೋಕೇಸ್ ‘ಗೋಸ್ ಫಾರ್ ಕಾನ್’ಗೆ ವೇದಿಕೆಯಾಗಿರುವ ಜಗತ್ತಿನ ಅತಿ ದೊಡ್ಡ ಸಿನಿಮಾ ಮಾರುಕಟ್ಟೆಗಳಲ್ಲಿ ಒಂದಾದ ಮಾರ್ಚೆ ಡು ಫಿಲ್ಮ್ ವಿವಿಧ ದೇಶಗಳ ಸಿನಿಮಾಗಳನ್ನು ಆಯ್ಕೆ ಮಾಡುತ್ತದೆ. ಇದಕ್ಕೆ ಭಾರತದ ಎನ್‌ಎಫ್‌ಡಿಸಿಗೆ ಪ್ರತ್ಯೇಕ ಸ್ಥಾನ ನೀಡಲಾಗಿದ್ದು, ಇದೇ ಮೊದಲ ಬಾರಿ ಎನ್‌ಎಫ್‌ಡಿಸಿ ಫಿಲ್ಮ್ ಬಜಾರ್ ನಲ್ಲಿ ಐದು ಭಾರತೀಯ ಸಿನಿಮಾಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಕನ್ನಡದ ‘ಪೆಡ್ರೋ’ ಕೂಡ ಸೇರಿದೆ
ಪೆಡ್ರೋ ಸಿನಿಮಾ ನಟೇಶ್ ಹೆಗ್ಡೆ ಅವರ ಚೊಚ್ಚಲ ನಿರ್ದೇಶನದ ಸಿನಿಮಾ ಆಗಿದ್ದು, ರಿಷಬ್ ಶೆಟ್ಟಿ ಬ್ಯಾನರ್ ನಲ್ಲಿ ನಿರ್ಮಿಸಲಾಗಿದೆ. ಇನ್ನು ತಮ್ಮ ಪೆಡ್ರೋ ಸಿನಿಮಾ ಮಾರ್ಚೆ ಡು ಫಿಲ್ಮ್ನಲ್ಲಿ ‘ಗೋಸ್ ಟು ಕಾನ್’ಗೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ ಎಂದು ಟ್ವೀಟ್ ಮಾಡಿ ರಿಷಬ್ ಶೆಟ್ಟಿ ಸಂತಸ ಹಂಚಿಕೊಂಡಿದ್ದಾರೆ.
ಚಿತ್ರೋತ್ಸವಕ್ಕೆ ವಿವಿಧ ದೇಶಗಳ, ಭಾಷೆಗಳ ಒಟ್ಟು 20 ಚಿತ್ರಗಳು ಆಯ್ಕೆಯಾಗಿದ್ದು, ಜೂನ್ 22-24ರ ಅವಧಿಯಲ್ಲಿ ಆನ್‌ಲೈನ್ ಮೂಲಕ ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತದೆ. ಚಿತ್ರೋದ್ಯಮದ ಪರಿಣತರು ಜೂನ್ 24ರಂದು ಸಿನಿಮಾ ನಿರ್ಮಾರ್ತೃಗಳ ಜತೆ ‘ಗೋಸ್ ಟು ಕಾನ್ ಸ್ಪೀಡ್ ಮೀಟಿಂಗ್’ಗಳಲ್ಲಿ ಸಂವಾದ ನಡೆಸುತ್ತಾರೆ.








