ಪೆಗಾಸಸ್ ಗೂಢಚರ್ಯೆಗೆ ಹಣ ನೀಡಿದ್ಯಾರು..? – ಸಂಜಯ್ ರಾವುತ್
ಮುಂಬೈ : ಇಸ್ರೇಲಿ ಮೂಲದ ಪೆಗಾಸಸ್ ಸಾಫ್ಟ್ ವೇರ್ ಕಂಪನಿ ಮೂಲಕ ಸಾವಿರಾರು ಜನರ ಮೇಲೆ ನಡೆದಿದ್ದ ಬೇಹುಗಾರಿಕೆ ಪ್ರಕರಣದಲ್ಲಿ ಕೇಂದ್ರದ ಪಾತ್ರವಿದೆ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸುತ್ತಾ ಕೇಂದ್ರ ಸರ್ಕಾರವನ್ನ ಕಟುವಾಗಿ ಟೀಕಿಸುತ್ತಿದ್ದಾರೆ.. ಈ ನಡುವೆ ಪತ್ರಕರ್ತರು ಮತ್ತು ರಾಜಕಾರಣಿಗಳು ಸೇರಿದಂತೆ ದೇಶದ ವಿವಿಧ ವರ್ಗಗಳ ಜನರ ಫೋನ್ ಕದ್ದಾಲಿಕೆ ಹಣ ನೀಡಿದ್ದು ಯಾರು ಎನ್ನುವುದು ಬಹಿರಂಗವಾಗುವುದು ಅಗತ್ಯವಿದೆ ಎಂದು ಶಿವಸೇನಾ ಸಂಸದ ಸಂಜಯ್ ರಾವುತ್ ಒತ್ತಾಯಿಸಿದ್ದಾರೆ.
ಶಿವಸೇನಾದ ಮುಖವಾಣಿ ಸಾಮ್ನಾದಲ್ಲಿನ ವಾರದ ಅಂಕಣ ರೋಖ್ಠೋಕ್ ನಲ್ಲಿ ಪೆಗಾಸಸ್ ಗೂಢಚರ್ಚೆಯನ್ನು ಹಿರೋಶಿಮಾ ಬಾಂಬ್ಗೆ ಹೋಲಿಸಿ ಮಾತನಾಡಿರೋ ಸಂಜಯ್ ರಾವತ್ ಅವರು ಜಪಾನ್ನ ಹಿರೋಶಿಮಾ ನಗರದ ಮೇಲೆ ನಡೆದ ಬಾಂಬ್ ದಾಳಿಯಿಂದ ಸಾವಿರಾರು ಜನರು ಸಾವಿಗೀಡಾದರು. ಆದರೆ, ಈಗ ನಡೆಯುತ್ತಿರುವ ಗೂಢಚರ್ಯೆಯಿಂದ ಸ್ವಾತಂತ್ರ್ಯದ ಸಾವು ಸಂಭವಿಸುತ್ತಿದೆ. ಆಧುನಿಕ ತಂತ್ರಜ್ಞಾನ ನಮ್ಮನ್ನು ಗುಲಾಮಗಿರಿಯತ್ತ ಕೊಂಡೊಯ್ಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ..
ಪೆಗಾಸಸ್ ಸಾಫ್ಟ್ವೇರ್ ಗೆ ಇಸ್ರೇಲಿ ಕಂಪನಿ ಎನ್ಎಸ್ಒ ವಾರ್ಷಿಕ 60 ಕೋಟಿ ರೂಪಾಯಿಯನ್ನು ಲೈಸೆನ್ಸ್ ಶುಲ್ಕವಾಗಿ ಪಡೆಯುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಒಂದು ಲೈಸನ್ಸ್ನಿಂದ 50 ದೂರವಾಣಿಗಳನ್ನು ಹ್ಯಾಕ್ ಮಾಡಬಹುದು. 300 ದೂರವಾಣಿಗಳಿಗೆ ಆರರಿಂದ 7 ಲೈಸನ್ಸ್ಗಳು ಅಗತ್ಯ. ಈ ಪ್ರಕ್ರಿಯೆಗೆ ಕೋಟ್ಯಾಂತರ ರೂಪಾಯಿ ಖರ್ಚಾಗುತ್ತೆ.. ಹಾಗಾದ್ರೆ ಇಷ್ಟೆಲ್ಲಾ ದೊಡ್ಡ ಮೊತ್ತವನ್ನು ಗೂಢಚರ್ಯೆಗಾಗಿ ಖರ್ಚು ಮಾಡಿದ್ಯಾರು ಮತ್ತು ಈ ಮೊತ್ತವನ್ನು ಪಾವತಿಸಿದ್ದು ಯಾರು..? ಎಂದು ಸಂಜಯ್ ರಾವತ್ ಅವರು ಪ್ರಶ್ನೆ ಮಾಡಿದ್ದಾರೆ.








