Pele Death : ಬ್ರೆಜಿಲ್ ಫುಟ್ಬಾಲ್ ದಂತಕಥೆ ಪೀಲೆ ಇನ್ನಿಲ್ಲ….
ಬ್ರೆಜಿಲ್ ಫುಟ್ಬಾಲ್ ದಂತಕಥೆ ಹಾಗೂ ಅತ್ಯುತ್ತಮ ಫುಟ್ಬಾಲ್ ಆಟಗಾರ ಪೀಲೆ (82) ಇನ್ನಿಲ್ಲ. ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಹಲವು ದಿನಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಸಾವೊ ಪಾಲೊದಲ್ಲಿನ ಆಲ್ಬರ್ಟ್ ಐನ್ಸ್ಟೈನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಿಧನರಾದರು. ಪೀಲೆ ಅವರ ಪುತ್ರಿ ಈ ಸುದ್ಧಿಯನ್ನ ಖಚಿತಪಡಿಸಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಪೀಲೆಯ ದೊಡ್ಡ ಕರುಳಿನಿಂದ ಕ್ಯಾನ್ಸರ್ ಗಡ್ಡೆಯನ್ನು ವೈದ್ಯರು ತೆಗೆದುಹಾಕಿದ್ದರು. ಅಂದಿನಿಂದ ಅವರು ಕೀಮೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶ್ವಾಸಕೋಶದ ಸೋಂಕು ಇರುವುದಾಗಿ ವೈದ್ಯರು ತಿಳಿಸಿದ್ದರು. ಹಲವು ಅಂಗಾಗ ವೈಪಲ್ಯದ ಕಾರಣದಿಂದ ಇಹಲೋಕ ತ್ಯಜಿಸಿದ್ದಾರೆ.
ಪೀಲೆ ಅಕ್ಟೋಬರ್ 23, 1940 ರಂದು ಬ್ರೆಜಿಲ್ನ ಟ್ರೆಸ್ ಕೊರಾಕೋಸ್ನಲ್ಲಿ ಜನಿಸಿದರು. ಪೀಲೆಯ ನಿಜವಾದ ಹೆಸರು ಎಡ್ಸನ್ ಅರಂಟ್ಸ್ ಡೊ ನಾಸಿಮಿಯೆಂಟೊ. ಪುಟ್ಬಾಲ್ ಇತಿಹಾಸದಲ್ಲಿ ಪೀಲೆ ಅತ್ಯುತ್ತಮ ಆಟಗಾರ ಮತ್ತು ದಂತಕಥೆ. ಪೀಲೆ ಬ್ರೆಜಿಲ್ ಪರ ವಿಶ್ವಕಪ್ ನಲ್ಲಿ ನಾಲ್ಕು ಬಾರಿ ಪ್ರತಿನಿಧಿಸಿದ್ದರು.
1958, 1962, 1970 ನಲ್ಲಿ ವಿಶ್ವಕಪ್ ವಿಜಯಗಳಲ್ಲಿ ಪೀಲೆ ಪ್ರಮುಖ ಪಾಲುದಾರ. ಫಾರ್ವರ್ಡ್ ಮತ್ತು ಆಕ್ರಮಣಕಾರಿ ಮಿಡ್ ಫೀಲ್ಡರ್ ಆಗಿ, ಮೈದಾನದಲ್ಲಿ ಪೀಲೆ ಅವರ ಸಾಧನೆಗಳು ಅಸಾಮಾನ್ಯವಾಗಿವೆ. ಫುಟ್ಬಾಲ್ ವಿಶ್ವಕಪ್ನಲ್ಲಿ ಆಡಿದ 14 ಪಂದ್ಯಗಳಲ್ಲಿ ಪೀಲೆ 12 ಗೋಲುಗಳನ್ನ ಗಳಿಸಿದ್ದಾರೆ. ಜುಲೈ 1971 ರಲ್ಲಿ ಯುಗೊಸ್ಲಾವಿಯಾ ವಿರುದ್ಧ ತಮ್ಮ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನ ಆಡಿದ ಅವರು ಎರಡು ದಶಕಗಳಿಂದ ಸಾಕರ್ ಪ್ರೇಮಿಗಳನ್ನ ರೋಮಾಂಚನಗೊಳಿಸಿದ್ದಾರೆ.
ಪೀಲೆ ಅವರಿಗೆ ಮೂವರು ಹೆಂಡತಿಯರಿದ್ದಾರೆ. ಇಬ್ಬರಿಗೆ ವಿಚ್ಚೇಧನ ಕೊಟ್ಟು ಮೂರನೇಯವರ ಜೊತೆ ವಾಸಿಸುತ್ತಿದ್ದಾರೆ. ಆದರೇ ಪೀಲೆಗೆ ಎಷ್ಟು ಮಕ್ಕಳಿದ್ದಾರೆ ಎಂಬ ಬಗ್ಗೆ ವಿವಾದಗಳಿವೆ. ಪೀಲೆ ಅವರೇ ಸಂದರ್ಶನದಲ್ಲಿ ಹೇಳಿರುವ ಪ್ರಕಾರ ತನಗೆ ಎಷ್ಟು ಮಕ್ಕಳಿದ್ದಾರೆ ನೆನಪಿಲ್ಲ ಎಂದಿದ್ದಾರೆ. ಅಧಿಕೃತ ದಾಖಲೆಗಳ ಪ್ರಕಾರ ಪೀಲೆಗೆ 7 ಮಕ್ಕಳಿದ್ದಾರೆ.
ಪೀಲೆ ತಮ್ಮ ವೃತ್ತಿಜೀವನದಲ್ಲಿ 92 ಪಂದ್ಯಗಳನ್ನ ಆಡಿ 78 ಗೋಲುಗಳನ್ನ ಗಳಿಸಿದ್ದಾರೆ. ಇವರ ನಂತರ ನೇಮರ್ ಬ್ರೆಜಿಲ್ ಪರ ಎರಡನೇ ಅತಿ ಹೆಚ್ಚು ಗೋಲು ಗಳಿಸಿದ್ದಾರೆ. ನೇಮರ್ 77 ಗೋಲು ಗಳಿಸಿದ್ದಾರೆ. ಪೀಲೆ ಅವರ ಸಾವಿನ ಕುರಿತು ಪೋರ್ಚುಗಲ್ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೋ, ಅರ್ಜೆಂಟೀನಾ ಆಟಗಾರ ಲಿಯೋನಲ್ ಮೆಸ್ಸಿ ಬ್ರೆಜಿಲ್ ಆಟಗಾರ ನೇಮರ್ ಮತ್ತು ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಸೇರಿದಂತೆ ವಿಶ್ವದಾದ್ಯಂತ ಹಲವಾಗು ಗಣ್ಯರು ಸಂತಾಪ ಸೂಚಿಸಿದ್ದಾರೆ.
Pele Death; Brazil Legendary Footballer Passed Away Due To Cancer