ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಮಾಡಿರುವ ಅವರು, ಸತತ ಮಳೆಯಿಂದ ಬೆಂಗಳೂರು ನಗರದ ಹಲವೆಡೆ ಜನ ಜೀವನ ಅಸ್ತವ್ಯಸ್ತ ಆಗಿದೆ. ರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರ ಅಸಾಧ್ಯವಾಗುತ್ತಿದೆ. ಮನೆಗಳಿಗೆ ನೀರು ನುಗ್ಗಿದೆ. ಈ ಪರಿಸ್ಥಿತಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ‘ಬ್ರಾಂಡೆಡ್ ನರಕ’ದಲ್ಲಿ ಜನರನ್ನು ನರಳುವ ಸ್ಥಿತಿಗೆ ತಲುಪಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಜನರು ಮಳೆಯಿಂದಾಗಿ ಬೀದಿಯಲ್ಲೇ ಜೀವನ ಸಾಗಿಸುತ್ತಿದ್ದಾರೆ. ಮನೆಯೊಳಗೆ ಕಾಲಿಡಲಾಗದ ಪರಿಸ್ಥಿತಿ ಇದೆ. ಆದರೆ ಈ ರಾಜ್ಯದ ಕಾಂಗ್ರೆಸ್ ನಾಯಕರು ಮಾತ್ರ ‘ಸಾಧನಾ ಸಮಾವೇಶ’ದ ಬಣ್ಣ ಬಣ್ಣದ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ, ಎಂದು ಆರೋಪಿಸಿದರು.
ಒಂದು ವಾರದಿಂದ ರಾಜ್ಯದ ರಸ್ತೆಗಳಲ್ಲಿ ಗ್ಯಾರಂಟಿಗಳ ಜಾಹೀರಾತುಗಳದ್ದೇ ಮೆರವಣಿಗೆ. ನಿಜ ಜೀವನದಲ್ಲಿ ಜನರ ನೋವಿಗೆ ಸ್ಪಂದನೆ ಇಲ್ಲ. ಬೆಂಗಳೂರು ಹಳ್ಳವಾಗಿದೆ, ಆದರೆ ಸರ್ಕಾರದ ನಾಯಕರಿಗೆ ಮಾತ್ರ ಪ್ರಚಾರದ ಜ್ವರ, ಎಂದು ಅವರು ಸರ್ಕಾರದ ನಿರ್ಲಕ್ಷ್ಯವನ್ನು ತೀವ್ರವಾಗಿ ಟೀಕಿಸಿದ್ದಾರೆ.








