ರಾಜ್ಯದ ಮೂಲೆ ಮೂಲೆಯಲ್ಲಿ ಅಪ್ಪುನನ್ನು ಪೂಜಿಸುತ್ತಾರೆ ಮತ್ತು ಆರಾಧಿಸುತ್ತಾರೆ : ಸಿಎಂ ಬೊಮ್ಮಾಯಿ
ಬೆಂಗಳೂರು: ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಹೆಸರು, ಹೆಸರಾಗಿ ಉಳಿದಿಲ್ಲ, ಕನ್ನಡಿಗರ ಉಸಿರಾಗಿದೆ ಎಂದು ಭಾನುವಾರ BBMP ನೌಕರರ ಕನ್ನಡ ಸಂಘ ಆಯೋಜಿಸಿದ್ದ ಪುನೀತ್ ರಾಜ್ಕುಮಾರ್ ಪ್ರತಿಮೆ ಅನಾವರಣ ಹಾಗೂ ಗಂಧದ ಗುಡಿ ಉದ್ಯಾನ ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾವುಕರಾದರು.
ಅಲ್ಲದೇ ಅಪ್ಪು ಚಿಕ್ಕ ವಯಸ್ಸಿನಲ್ಲೇ ನಮ್ಮನ್ನು ಅಗಲಿದ್ದಾರೆ, ಎಲ್ಲರ ಜೊತೆ ನಗು ನಗುತ್ತಲೇ ಇದ್ದು, ನಗು ನಗುತ್ತಲೇ ಹೋದವರು. ರಾಜ್ಯದ ಮೂಲೆ ಮೂಲೆಯಲ್ಲಿ ಅಪ್ಪುನನ್ನು ಪೂಜಿಸುತ್ತಾರೆ ಮತ್ತು ಆರಾಧಿಸುತ್ತಾರೆ. ಇಂದಿಗೂ ಅಪ್ಪು ಸಮಾಧಿ ವೀಕ್ಷಣೆಗೆ ಸಾವಿರಾರು ಜನ ಅಭಿಮಾನಿಗಳು ಬರುತ್ತಿದ್ದಾರೆ.
ಅಪ್ಪು ನಮ್ಮನ್ನು ಬಿಟ್ಟು ಹೋಗಿಲ್ಲಾ, ಅವರು ನಮ್ಮೊಂದಿಗೆ ಚಿರಸ್ಥಾಯಿಯಾಗಿ ಇರುತ್ತಾರೆ. ಪುನಿತ್ ಜಾತ್ರೆಯಲ್ಲಿ ಭಾಗಿಯಾದ ನಾವೇ ಧನ್ಯರು. ಅಜಾತಶತ್ರು. ಕನ್ನಡ ಚಿತ್ರರಂಗದಲ್ಲಿ ಮುಗ್ದತೆಯನ್ನು ಕಾಪಾಡಿಕೊಂಡವರು ರಾಜ್ ಕುಮಾರ್, ಪುನೀತ್ ಎಂದು ಹೇಳಿದರು.
ಅಪ್ಪುಗೆ ಕರ್ನಾಟಕ ರತ್ನ ಘೋಷಣೆಯಾಗಿದ್ದು, ಶಿವಣ್ಣ, ರಾಘಣ್ಣನವರ ಜೊತೆ ಮಾತನಾಡಿ ಅತಿಶೀಘ್ರದಲ್ಲಿ ಅತಿ ದೊಡ್ಡಮಟ್ಟದಲ್ಲಿ ಕಾರ್ಯಕ್ರಮ ಮಾಡಿ ಪ್ರಶಸ್ತಿ ಪ್ರಧಾನ ಮಾಡುತ್ತೇವೆ. ಅಪ್ಪು ತೀರಿಕೊಂಡಾಗ ಶಿವಣ್ಣ, ರಾಘಣ್ಣ ಅತೀ ಮುತ್ಸದ್ದಿತನದಿಂದ ನಡೆದುಕೊಂಡರು ಯಾವುದೇ ಅಹಿತಕರ ಘಟನೆಯಾಗದಂತೆ ಸಹಕರಿಸಿದರು. ಅವರ ಕುಟುಂಬಕ್ಕೆ ನಮ್ಮ ಸರ್ಕಾರ ಚಿರರುಣಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ರಾಘವೇಂದ್ರ ರಾಜ್ಕುಮಾರ್ ಪುನೀತ್ ನಟಿಸಿದ ಕೊನೆಯ 4 ಸಿನಿಮಾಗಳು ಸಮಾಜಕ್ಕೆ ಮಾದರಿಯಾಗುವಂತಹವು. ರಾಜಕುಮಾರ, ಯುವರತ್ನ, ಗಂಧದಗುಡಿ, ಜೇಮ್ಸ್ ಸಮಾಜಕ್ಕೆ ಸಂದೇಶ ಸಾರುವ ಸಿನಿಮಾಗಳಾಗಿವೆ. ಅಪ್ಪು ಸಮಾಜಕ್ಕೆ ಸೇವೆ ಮಾಡಿ, ಹೇಳೇದೆ ಕೇಳದೆ ಹೊರಟು ಹೋದ. ಅವನ ಬದುಕಿದ 46 ವರ್ಷವೂ ಸಿನಿಮಾದಲ್ಲೇ ಇದ್ದ. ಅಪ್ಪು ಸದಾ ಅಭಿಮಾನಿಗಳ ಹೃದಯದಲ್ಲಿ ಇರುತ್ತಾನೆ. ಈಗ ಅಪ್ಪ ಅಮ್ಮನ ಜೊತೆ ಮಲಗಿದ್ದಾನೆ ಅಷ್ಟೇ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಮುನಿರತ್ನ, ವಿ ಸುನಿಲ್ ಕುಮಾರ್, ಸಂಸದ ಪಿ.ಸಿ ಮೋಹನ್, ರಾಘವೇಂದ್ರ ರಾಜಕುಮಾರ್, ತಾರಾ, ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಪ್ರಶಸ್ತಿ ಪುರಸ್ಕೃತರು ಸಭಾಂಗಣದಲ್ಲಿ ಉಪಸ್ಥಿತರಿದ್ದರು.