ಬೆಂಗಳೂರು: ರೈತ ವಿರೋಧಿ ಮಸೂದೆಗಳನ್ನು ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿಗಳು ಸರ್ಕಾರಗಳು ತರುವ ಮೂಲಕ ಜನರ ನಂಬಿಕೆಗಳನ್ನು ಹುಸಿ ಮಾಡಿವೆ. ಹೀಗಾಗಿ ಕಾಂಗ್ರೆಸ್ ಪಕ್ಷವನ್ನು ಯಾಕೆ ಸೋಲಿಸಿದ್ವಿ ಎಂದು ಜನರು ಈಗ ಪರಿತಪಿಸುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಆರಮನೆ ಮೈದಾನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷವನ್ನು ಯಾಕೆ ಸೋಲಿಸಿದ್ವಿ ಎಂದು ಜನಕ್ಕೆ ಈಗ ಗೊತ್ತಾಗಿದೆ. ಹೀಗಾಗಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂಬ ಚರ್ಚೆ ಶುರು ಆಗಿದೆ ಎಂದಿದ್ದಾರೆ.

2018ರಲ್ಲಿ ಜೆಡಿಎಸ್‍ಗೆ ಬೆಂಬಲ ನೀಡಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂತು. ಸಮ್ಮಿಶ್ರ ಸರ್ಕಾರ ಐದು ವರ್ಷಗಳ ಕಾಲ ಪೂರೈಸಲಿಲ್ಲ. ನಮ್ಮ ಮತ್ತು ಜೆಡಿಎಸ್ ಶಾಸಕರನ್ನು ಹಣದ ಆಸೆ ತೋರಿಸಿ ರಾಜೀನಾಮೆ ಕೊಡಿಸಿ ಆಪರೇಷನ್ ಕಮಲ ಮಾಡಿ ಕೋಟ್ಯಂತರ ರೂ. ಖರ್ಚು ಮಾಡಿದರು. ಒಬ್ಬ ಶಾಸಕರಿಗೆ 20 ರಿಂದ 25 ಕೋಟಿ ಖರ್ಚು ಮಾಡಿದರು. ಇದರಿಂದ ನಾವು ಆಪರೇಷನ್ ಕಮಲವನ್ನು ತಡೆಯಲು ಆಗಲಿಲ್ಲ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಆಪರೇಷನ್ ಕಮಲ ಅಂತ ಹೆಸರು ಬಂದಿದೆ. ಅದು 2008ರಲ್ಲಿ, ಆಗ ಅವರಿಗೆ ಬಹುಮತ ಇರಲಿಲ್ಲ ಆ ನಂತರ ಚುನಾವಣೆಗೆ ಹೋಗಿ ಅಲ್ಲಿ ಕೋಟಿ ಕೋಟಿ ಹಣ ಖರ್ಚು ಮಾಡಿ ಅಧಿಕಾರಕ್ಕೆ ಬಂದಿದ್ದರು. ಈಗಲೂ ಅದನ್ನೇ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.








