ಬೆಂಗಳೂರು: ಕೊರೊನಾ ವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಇಂದಿನಿಂದ ಮಾರ್ಚ್ 31ರವರೆಗೆ ಕರ್ನಾಟಕ ಸಂಪೂರ್ಣ ಲಾಕ್ ಡೌನ್ ಆಗಲಿದ್ದು, ಅಗತ್ಯ ಸೇವೆಗಳು ಮಾತ್ರ ಲಭ್ಯವಿರಲಿದೆ. ಆದ್ರೆ ಬೆಂಗಳೂರಿನಲ್ಲಿ ಮಾತ್ರ ಎಂದಿನಂತೆ ದಿನಪತ್ರಿಕೆಗಳ ಮಾರಾಟ ಶುರುವಾಗಿದೆ. ಚಾಮರಾಜಪೇಟೆ, ಯಲಹಂಕ, ಬಿಟಿಎಂ ಲೇಔಟ್ ಸೇರಿದಂತೆ ಎಲ್ಲಾ ಕಡೆ ದೈನಂದಿನ ಚಟುವಟಿಕೆಗಳು ಆರಂಭವಾಗಿದೆ. ಇನ್ನೊಂದೆಡೆ ದಿನನಿತ್ಯದ ಬಳಕೆಗೆ ಬೇಕಾಗುವ ವಸ್ತುಗಳನ್ನ ಖರೀದಿಸಲು ಜನರು ಮಾರುಕಟ್ಟೆಗಳಿಗೆ ಮುಗಿಬಿದ್ದಿದ್ದಾರೆ.
ಕೆ.ಆರ್ ಮಾರ್ಕೆಟ್ ಓಪನ್!
ಸರ್ಕಾರ ಕರ್ನಾಟಕವನ್ನು ಲಾಕ್ ಡೌನ್ ಮಾಡಿದ್ದರೂ ಆದಾಗ್ಯು, ಇವತ್ತು ಬೆಳ್ಳಂಬೆಳಗ್ಗೆ ವ್ಯಾಪಾರಸ್ಥರು ಕೆ.ಆರ್.ಮಾರ್ಕೆಟ್ ನಲ್ಲಿ ವಹಿವಾಟವನ್ನು ಆರಂಭಿಸಿದ್ದರು. ಹೂವು-ಹಣ್ಣು, ತರಕಾರಿ ವ್ಯಾಪಾರ ಪ್ರಾರಂಭಿಸಿದ ವರ್ತಕರು ತಮ್ಮ ಕಾರ್ಯದಲ್ಲಿ ನಿರತರಾಗಿದ್ದರು. ಅಲ್ಲದೆ ಲಾಕ್ ಡೌನ್ ಹಿನ್ನೆಲೆ, ಅಗತ್ಯವಸ್ತುಗಳನ್ನು ಖರೀದಿಸಲು ಜನರು ಬೆಳಗಿನ ಜಾವವೇ ಮಾರ್ಕೆಟ್ ಗೆ ಆಗಮಿಸಿದ್ದರು. ಇನ್ನೂ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳದಲ್ಲಿದ್ದ, ಆಟೋ ಚಾಲಕರಿಗೆ, ವ್ಯಾಪಾರಸ್ಥರಿಗೆ ಎಚ್ಚರಿಕೆ ನೀಡಿ ಬಂದ್ ಮಾಡಿಸಿದ್ದಾರೆ.
ಇನ್ನೂ ರಾಜ್ಯಾದ್ಯಂತ ಯುಗಾದಿ ಹಬ್ಬದ ಹಿನ್ನೆಲೆ ವ್ಯಾಪಾರ ವಹಿವಾಟು ಜೋರಾಗಿದೆ. ಮಂಗಳೂರು, ಕಲಬುರಗಿ, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಹಲವು ಕಡೆ ಜನರು ಹಬ್ಬದ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದಿದ್ದಾರೆ.








