ಬೆಂಗಳೂರು: ಬೆಳಗಾವಿ ಜಿಲ್ಲೆಯ ಪೀರನವಾಡಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಗೆ ಅನುಮತಿ ನೀಡುವಂತೆ ನಡೆಯುತ್ತಿರುವ ಹೋರಾಟ ತೀವ್ರಗೊಂಡಿದ್ದು, ರಾಜ್ಯ ಸರ್ಕಾರ ಹೋರಾಟಕ್ಕೆ ಮಣಿಯುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ರಾಯಣ್ಣ ಪ್ರತಿಮೆ ಸ್ಥಾಪನೆಗೆ ಸರ್ಕಾರದ ವಿರೋಧ ಇಲ್ಲ ಎಂದು ತಿಳಿಸಿದ್ದಾರೆ.
ಪ್ರತಿಮೆ ಸ್ಥಾಪನೆಗೆ ಪಟ್ಟು ಹಿಡಿದು ಬೆಳಗಾವಿಯಲ್ಲಿ ರಾಯಣ್ಣ ಅಭಿಮಾನಿಗಳು ಧರಣಿ ನಡೆಸುತ್ತಿರುವ ಬಗ್ಗೆ ನಿನ್ನೆಯೇ ನಿರಂಜನಾನಂದಪುರಿ ಸ್ವಾಮೀಜಿ ಜತೆ ಮಾತನಾಡಿದ್ದೇನೆ. ಗೊಂದಲ ಇಲ್ಲದಂತೆ ಸಮಸ್ಯೆ ಬಗೆಹರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿಗೆ ಸೂಚನೆ ನೀಡಿದ್ದೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಬಿಎಸ್‍ವೈ ಗ್ರೀನ್ ಸಿಗ್ನಲ್..!
ಪೀರನವಾಡಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ನಿನ್ನೆ ನಿರಂಜನಾನಂದಪುರಿ ಸ್ವಾಮೀಜಿ ಭೇಟಿ ವೇಳೆ ಸಿಎಂ ಭರವಸೆ ನೀಡಿದ್ದಾರೆ. ಹೀಗಾಗಿ ರಾಯಣ್ಣ ಪ್ರತಿಮೆ ಸ್ಥಾಪನೆಗೆ ಯಾರ ವಿರೋಧ ಇಲ್ಲ. ತಾಂತ್ರಿಕ ತೊಂದರೆಯಿಂದ ಪ್ರತಿಮೆ ನಿರ್ಮಾಣ ಸ್ವಲ್ಪ ವಿಳಂಬವಾಗಿದೆ ಎಂದು ಮಾಜಿ ಸಚಿವ ಹೆಚ್.ಎಂ ರೇವಣ್ಣ ತಿಳಿಸಿದ್ದಾರೆ.









