ದೆಹಲಿ, ಮೇ 24 : ಬೆಂಗಳೂರಿನಲ್ಲಿ ಕೆರೆ ಒತ್ತುವರಿ ವಿಚಾರವಾಗಿ, ರಿಯಲ್ ಎಸ್ಟೇಟ್ ಡೆವಲಪರ್ ಮಂತ್ರಿ ಟೆಕ್‌ಜೋನ್‌ಗೆ ವಿಧಿಸಲಾಗಿದ್ದ ದಂಡದ ಆದೇಶದ ವಿರುದ್ಧ ಸಲ್ಲಿಕೆಯಾಗಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಬೆಂಗಳೂರಿನಲ್ಲಿ ಕೆರೆ ಒತ್ತುವರಿ ವಿಚಾರವಾಗಿ ಮಂತ್ರಿ ಟೆಕ್‌ಜೋನ್‌ಗೆ ₹117 ಕೋಟಿ ದಂಡ ವಿಧಿಸಿದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಕ್ಯುರೇಟಿವ್ ಅರ್ಜಿ ಸಲ್ಲಿಸಲಾಗಿತ್ತು.
ನ್ಯಾಯಮೂರ್ತಿಗಳಾದ ಎನ್.ವಿ.ರಮಣ, ಅರುಣ್ ಮಿಶ್ರಾ, ರೋಹಿಂಟನ್ ಫಲಿ ನಾರಿಮನ್, ಎಸ್.ಅಬ್ದುಲ್ ನಜೀರ್ ಹಾಗೂ ಎಂ.ಆರ್. ಶಾ ಅವರನ್ನು ಒಳಗೊಂಡ ನ್ಯಾಯಪೀಠವು ಈ ಅರ್ಜಿಯನ್ನು ತಿರಸ್ಕರಿಸಿತು. 2002ರ ರೂಪಾ ಅಶೋಕ್ ಹುರಾ ಮತ್ತು ಅಶೋಕ್ ಹುರಾ ಪ್ರಕರಣದ ತೀರ್ಪು ಉಲ್ಲೇಖಿಸಿದ ನ್ಯಾಯ ಪೀಠವು ನಾವು ಕ್ಯುರೇಟಿವ್ ಅರ್ಜಿಯನ್ನು ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದ್ದೇವೆ ಎಂದು ತಿಳಿಸಿ ಅರ್ಜಿ ವಜಾಗೊಳಿಸಿದೆ.
ಏನಿದು ಪ್ರಕರಣ :
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) 2016ರ ಮೇ 4ರಂದು ಬೆಂಗಳೂರಿನ ಕೆರೆಗಳು ಮತ್ತು ರಾಜ ಕಾಲುವೆಗಳ ಬಫರ್ ವಲಯದ ಮಿತಿ ಹೆಚ್ಚಿಸಿ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ 2019ರ ಮಾರ್ಚ್ 5ರಂದು ರದ್ದುಗೊಳಿಸಿತ್ತು.ಟೆಕ್‌ಜೋನ್ ಇದನ್ನು ಮರುಪರಿಶೀಲಿಸುವಂತೆ ಕೋರಿ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಿತ್ತು. ಮರುಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ 2019ರ ಆಗಸ್ಟ್ 6ರಂದು ತೀರ್ಪು ಪ್ರಕಟಿಸಿತ್ತು. ಈ ಆದೇಶದ ವಿರುದ್ಧ ಟೆಕ್‌ಜೋನ್ ಕ್ಯುರೇಟಿವ್ ಅರ್ಜಿ ಸಲ್ಲಿಸಿತ್ತು.
ಮಂತ್ರಿ ಟೆಕ್‌ಜೋನ್ ಪ್ರೈ.ಲಿ. ಹಾಗೂ ಕೋರ್ ಮೈಂಡ್ ಸಾಫ್ಟ್‌ವೇರ್ ಮತ್ತು ಸರ್ವೀಸಸ್ ಪ್ರೈ.ಲಿ., ಕೆರೆ ಒತ್ತುವರಿ ವಿಚಾರವಾಗಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.ಬೆಳ್ಳಂದೂರು ಮತ್ತು ಅಗರ ಕೆರೆಗಳ ಸಂರಕ್ಷಿತ ವಲಯದಲ್ಲಿ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್, ಹೋಟೆಲ್, ಬಹುಮಹಡಿ ಕಾರು ನಿಲುಗಡೆ ಸಂಕೀರ್ಣ, ವಾಣಿಜ್ಯ ಮತ್ತು ವಸತಿ ಸಮುಚ್ಛಯ ನಿರ್ಮಿಸಿದಲ್ಲಿ ಪರಿಸರದ ಮೇಲೆ ಭಾರಿ ಪರಿಣಾಮ ಉಂಟಾಗಲಿದೆ ಎಂಬ ಎನ್‌ಜಿಟಿಯ ಅಭಿಪ್ರಾಯಕ್ಕೆ ಸಮ್ಮತಿ ಸೂಚಿಸಿದ ನ್ಯಾಯಪೀಠ ಕೆರೆ ಒತ್ತುವರಿ ಮಾಡಿದ್ದಕ್ಕೆ ಮಂತ್ರಿ ಟೆಕ್‌ಜೋನ್‌ಗೆ ₹117 ಕೋಟಿ ದಂಡ, ಕೋರ್ ಮೈಂಡ್ ಸಾಫ್ಟ್‌ವೇರ್ ಮತ್ತು ಸರ್ವೀಸಸ್ ಪ್ರೈ.ಲಿ.ಗೆ ₹13.5 ಕೋಟಿ ದಂಡವನ್ನು ವಿಧಿಸಿ ಆದೇಶ ಹೊರಡಿಸಿತ್ತು. ಈ ತೀರ್ಪನ್ನು ಮರುಪರಿಶೀಲನೆ ನಡೆಸುವಂತೆ ಕೋರಿ ಸಲ್ಲಿಸಿದ್ದ, ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇದೀಗ ವಜಾಗೊಳಿಸಿದೆ








