ಕಾಲಿವುಡ್ ನಟ ಅಜಿತ್ ಅಭಿಮಾನಿ ಮೇಲೆ ಪೆಟ್ರೋಲ್ ಬಾಂಬ್ ಎಸೆತ
ಕಾಲಿವುಡ್ ನಟ ಅಜಿತ್ ಕುಮಾರ್ ನಟನೆಯ ವಲಿಮೈ ಚಿತ್ರ ಇಂದು ಭರ್ಜರಿಯಾಗಿ ಬಿಡುಗಡೆಯಾಗಿದೆ. ಮುಂಜಾನೆ 4 ಗಂಟೆಯಿಂದಲೇ ಪ್ರದರ್ಶನ ನಡೆಯುತ್ತಿದ್ದು, ಅಭಿಮಾನಿಗಳು ನೆಚ್ಚಿನ ಹೀರೋ ನೋಡಲು ಥಿಯೇಟರ್ ಗಳಿಗೆ ಮುಗಿಬಿದ್ದಿದ್ದಾರೆ,
ಕೋಯಮತ್ತೂರಿನಲ್ಲಿ ವಲಿಮೈ ಪ್ರದರ್ಶನದ ವೇಳೆ ಅವಘಡವೊಂದು ನಡೆದಿದೆ. ಚಿತ್ರಮಂದಿರದ ಹೊರಗೆ ನೆರೆದಿದ್ದ ಜನಸಮೂಹದ ಮೇಲೆ ಮೋಟಾರ್ಸೈಕಲ್ನಲ್ಲಿ ಬಂದ ಗ್ಯಾಂಗ್ ಪೆಟ್ರೋಲ್ ಬಾಂಬ್ ಎಸೆದಿದ್ದಾನೆ. ಪರಿಣಾಮ ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ . ನಗರದ ಗಾಂಧಿಪುರಂನಲ್ಲಿರುವ ಥಿಯೇಟರ್ ಕಾಂಪ್ಲೆಕ್ಸ್ ಎದುರು ನವೀನ್ ಕುಮಾರ್ ಎಂಬ ಅಭಿಮಾನಿ ಫ್ಲೆಕ್ಸ್ ಬೋರ್ಡ್ ಹಾಕುತ್ತಿದ್ದಾಗ ಬೆಳಗಿನ ಜಾವ 4.30ರ ಸುಮಾರಿಗೆ ಈ ಘಟನೆ ನಡೆದಿದೆ. ಇಬ್ಬರು ಬೈಕ್ನಲ್ಲಿ ಬಂದು ಆತನ ಮೇಲೆ ಪೆಟ್ರೋಲ್ ಬಾಂಬ್ ಎಸೆದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೆಟ್ರೋಲ್ ಬಾಂಬ್ ಎಸೆತದಲ್ಲಿ ನವೀನ್ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಥಿಯೇಟರ್ ಬಳಿ ಉದ್ವಿಗ್ನ ವಾತವರಣ ಸೃಷ್ಟಿಯಾಗಿತ್ತು. ಬ್ಯಾನರ್ ಕಟ್ಟುವ ವಿಚಾರದಲ್ಲಿ ಅಭಿಮಾನಿಗಳ ನಡುವೆ ನಡೆದ ಪೈಪೋಟಿ ಅಪರಾಧಕ್ಕೆ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಥಿಯೇಟರ್ ಬಳಿ ಬಿಗಿ ಭದ್ರತೆ ಹೆಚ್ಚಿಸಲಾಗಿದೆ.
ಹೆಚ್ ವಿನೋದ್ ನಿರ್ದೇಶನದ ವಲಿಮೈ ಚಿತ್ರ ಗುರುವಾರ ವಿಶ್ವದಾದ್ಯಂತ ರಿಲೀಸ್ ಆಗಿದೆ. ಬಾಲಿವುಡ್ ನಟಿ ಹುಮಾ ಖುರೇಷಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತೆಲುಗು ನಟ ಕಾರ್ತಿಕೇಯ ನಟಿಸಿದ್ದಾರೆ. ಚಿತ್ರದ ಆಕ್ಷನ್ ಸೀಕ್ವೆನ್ಸ್ ಕುರಿತು ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ..