PFI ಮಾತ್ರವಲ್ಲ ಕೋಮುವಾದಿ ಸಂಘಟನೆಗಳನ್ನೂ ನಿಷೇಧಿಸಬೇಕು
ಬೆಂಗಳೂರು : PFI ಮಾತ್ರವಲ್ಲ, ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಎಲ್ಲಾ ಮೂಲಭೂತವಾದಿ, ಕೋಮುವಾದಿ ಸಂಘಟನೆಗಳನ್ನೂ ನಿಷೇಧಿಸಬೇಕು ಎಂದು ರಾಜ್ಯ ಕಾಂಗ್ರೆಸ್ ಒತ್ತಾಯಿಸಿದೆ.
ಕೇಂದ್ರ ಸರ್ಕಾರ ದೇಶದಾದ್ಯಂತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ಐದು ವರ್ಷಗಳ ಕಾಲ ಬ್ಯಾನ್ ಮಾಡಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಈ ಬಗ್ಗೆ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಸಂವಿಧಾನದ ಆಶಯಕ್ಕೆ ಹಾಗೂ ಭಾರತದ ಜಾತ್ಯತೀತ ತತ್ವಗಳಿಗೆ ವಿರುದ್ಧವಾಗಿರುವ ಯಾವುದೇ ಸಂಘಟನೆ ಅಥವಾ ರಾಜಕೀಯ ಪಕ್ಷಗಳನ್ನು ಕಾಂಗ್ರೆಸ್ ಪಕ್ಷ ವಿರೋಧಿಸಿಕೊಂಡೇ ಬಂದಿದೆ. PFI ಸೇರಿದಂತೆ ಸಮಾಜದಲ್ಲಿ ದ್ವೇಷ ಬಿತ್ತುವ, ಶಾಂತಿ, ಸಾಮರಸ್ಯ ಕದಡುವ ಯಾವುದೇ ಸಂಘಟನೆಗಳನ್ನು ನಿಷೇಧಿಸುವುದನ್ನು ಕಾಂಗ್ರೆಸ್ ಪಕ್ಷ ಸ್ವಾಗತಿಸುತ್ತದೆ ಎಂದು ಬರೆದುಕೊಂಡಿದೆ.

PFI ಮಾತ್ರವಲ್ಲ, ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಎಲ್ಲಾ ಮೂಲಭೂತವಾದಿ, ಕೋಮುವಾದಿ ಸಂಘಟನೆಗಳನ್ನೂ ನಿಷೇಧಿಸಬೇಕು. PFI ಸಂಘಟನೆಯನ್ನು ಪೋಷಿಸಿಕೊಂಡು ಬಂದಿದ್ದು ಬಿಜೆಪಿಯೇ ಎಂದು ಸತ್ಯಜಿತ್ ಸುರತ್ಕಲ್ ಸೇರಿದಂತೆ ಹಲವು ಸಂಘಪರಿವಾರದ ನಾಯಕರು ಹೇಳಿದ್ದರು, ಆ ಬಗ್ಗೆಯೂ ತನಿಖೆಯಾಗಬೇಕು. PFI ಪೋಷಕರ ಬಗ್ಗೆ ಜಗತ್ತಿಗೆ ತಿಳಿಯಬೇಕು.
PFI ಹಾಗೂ SDPI ಒಂದೇ ನಾಣ್ಯದ ಎರಡು ಮುಖಗಳಂತಿದ್ದವು, ಚುನಾವಣಾ ರಾಜಕೀಯದಲ್ಲಿ ಹೆಚ್ಚು ಸಕ್ರಿಯವಾಗಿರುವ SDPI ಸಂಘಟನೆಯ ಬಗ್ಗೆ ಚಕಾರ ಎತ್ತದಿರುವುದೇಕೆ ಬಿಜೆಪಿ ಸರ್ಕಾರ. SDPIಗೂ ಬಿಜೆಪಿಗೂ ಇರುವುದು “ಯಾವ ಜನ್ಮದ ಮೈತ್ರಿ”? PFI ಜೊತೆಗೆ ಇದ್ದ ಬಿಜೆಪಿಯ ಹೊಂದಾಣಿಕೆ ಎಂತದ್ದು? ಈ ಆಯಾಮದಲ್ಲಿ NIA ತನಿಖೆ ನಡೆಸಬೇಕಿದೆ ಎಂದು ಕಾಂಗ್ರೆಸ್ ಒತ್ತಾಯಿಸಿದೆ.









