ಕೇಸರಿಪಡೆಗೆ ಟಕ್ಕರ್ ನೀಡಲು ಕಾಂಗ್ರೆಸ್ ಸಿದ್ಧತೆ
ಗಾಯಗೊಂಡ ಹುಲಿಯಂತಾದ ಕಾಂಗ್ರೆಸ್, ಬೇಟೆಗೆ ರೆಡಿ
ಆ.15ಕ್ಕೆ ಸಿಎಂ ಆಗಿ ಕಮಲನಾಥ್ ಧ್ವಜಾರೋಹಣ
ಭೂಪಾಲ್: ಮಧ್ಯಪ್ರದೇಶದ ರಾಜಕೀಯ ಬಿಕ್ಕಟ್ಟಿಗೆ ಮುಖ್ಯಮಂತ್ರಿ ಕಮಲನಾಥ್ ರಾಜೀನಾಮೆ ಮೂಲಕ ಬ್ರೇಕ್ ಬಿದ್ದಿದೆ ಎನ್ನಲಾಗಿತ್ತು. ಆದ್ರೆ ಮಧ್ಯಪ್ರದೇಶ ಕಾಂಗ್ರೆಸ್ ಘಟಕದ ಆ ಒಂದು ಟ್ವೀಟ್ ಪಿಕ್ಚರ್ ಅಭಿ ಬಾಕಿ ಹೈ ಎಂಬ ಸುಳಿವು ನೀಡಿದೆ. ಮುಖ್ಯಮಂತ್ರಿ ಕಮಲನಾಥ್ ಶುಕ್ರವಾರ ಮಧ್ಯಾಹ್ನದ ವೇಳೆಗೆ ರಾಜ್ಯಪಾಲರಾದ ಲಾಲ್ಜಿ ಟಂಡನ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದರು. ಆದರೆ, ಇದಾದ ಕೆಲವೇ ಗಂಟೆಗಳಲ್ಲಿ ಟ್ವೀಟ್ ಮಾಡಿದ್ದ ಮಧ್ಯಪ್ರದೇಶ ಕಾಂಗ್ರೆಸ್, ‘ಈ ವರ್ಷ ಆಗಸ್ಟ್ 15ರಂದು ಕಮಲನಾಥ್ ಮತ್ತೆ ಮುಖ್ಯಮಂತ್ರಿಯಾಗಿ ತ್ರಿವರ್ಣ ಧ್ವಜ ಹಾರಿಸಲಿದ್ದಾರೆ, ಪೊಲೀಸ್ ಅಧಿಕಾರಿಗಳಿಂದ ಸೆಲ್ಯೂಟ್ ಸ್ವೀಕರಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದೆ.
ಸದ್ಯ ಕಾಂಗ್ರೆಸ್ ನ ಈ ಟ್ವೀಟ್ ಹಲವು ಪ್ರಶ್ನೆಗಳನ್ನು ಹುಟ್ಟಾಕಿದೆ. ಆಪರೇಷನ್ ಕಮಲಕ್ಕೆ ಸಿಲುಕಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ರಿವರ್ಸ್ ಆಪರೇಷನ್ ಮಾಡಲಿದ್ಯಾ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.
ಟ್ವೀಟ್ ಬೆನ್ನಿಗೆ ವಿದಾಯದ ಭಾಷಣದ ವೇಳೆ ಕಮಲನಾಥ್, ‘ಮಧ್ಯಪ್ರದೇಶದಲ್ಲಿ ನಮ್ಮ ಸರ್ಕಾರವನ್ನು ಉರುಳಿಸುವ ಸಲುವಾಗಿ ಬಿಜೆಪಿ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಕೆಲವು ದುರಾಸೆಯ ಶಾಸಕರ ಸಂಪರ್ಕ ಸಾಧಿಸಿದೆ’ ಎಂದು ಆರೋಪಿಸಿದರು. ಅಲ್ಲದೆ, ‘ಇಂದು ಕಾಂಗ್ರೆಸ್ ಪಕ್ಷಕ್ಕೆ ಆಗಿರುವ ಆಘಾತ ನಾಳೆ ಬಿಜೆಪಿಗೂ ಆಗಬಹುದು’ ಎಂದಿದ್ದಾರೆ. ಕಮಲನಾಥ್ ಅವರ ಈ ಹೇಳಿಕೆ ಆಪರೇಷನ್ ಹಸ್ತ ನಡೆಸುವ ಬಗ್ಗೆ ಸುಳಿವು ನೀಡಿದ್ದು, ಈಗಾಗಲೇ ಈ ವಿಚಾರವಾಗಿ ತಯಾರಿ ಆರಂಭವಾಗಿದೆ ಎನ್ನಲಾಗುತ್ತಿದೆ.
ಉಪಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ
ಕೇವಲ ಆಪರೇಷನ್ ಹಸ್ತ ಅಲ್ಲದೆ ಮುಂದಿನ ಉಪಚುನಾವಣೆಯಲ್ಲಿ ಪ್ರಾಬಲ್ಯ ಸಾಧಿಸಲು ಕಾಂಗ್ರೆಸ್ ರಣತಂತ್ರ ರೂಪಿಸಿದೆಯಂತೆ. ಕಮಲನಾಥ್ ನೇತೃತ್ವದ ಕಾಂಗ್ರೆಸ್ ಪಕ್ಷದ 22 ಅತೃಪ್ತ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಈ 22 ಕ್ಷೇತ್ರಗಳಿಗೂ ಶೀಘ್ರವೇ ಉಪಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ 17 ಸ್ಥಾನಗಳಲ್ಲಿ ಜಯ ಗಳಿಸಿದರೆ ಮತ್ತೆ ಅಧಿಕಾರಕ್ಕೆ ಏರುವುದು ಖಚಿತ. ಹೀಗಾಗಿ ಶತಾಯಗತಾಯ ಬೈ ಎಲೆಕ್ಷನ್ ನಲ್ಲಿ 17 ಸ್ಥಾನ ಗೆಲ್ಲಲೇಬೇಕೆಂದು ಕಾಂಗ್ರೆಸ್ ನಾಯಕರು ಪಣ ತೊಟ್ಟಿದ್ದಾರಂತೆ.
ಒಟ್ಟಾರೆ ಗಾಯಗೊಂಡ ಹುಲಿಯಂತಾಗಿರುವ ಕಾಂಗ್ರೆಸ್, ಕೇಸರಿ ಪಡೆಗೆ ಟಕ್ಕರ್ ನೀಡಿ ಅಧಿಕಾರಕ್ಕೆ ಬರುತ್ತಾ ಅಥವಾ ಬೈ ಎಲೆಕ್ಷನ್ ನಲ್ಲಿ ಸೋತು ಸುಮ್ಮನಾಗುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.