ಪಿಲಿಕುಳ – 10 ಬಾರ್ಕಿಂಗ್ ಡೀರ್ ಗಳು ಬೀದಿ ನಾಯಿಗಳ ದಾಳಿಯಿಂದ ಸಾವು
ಮಂಗಳೂರು, ಜೂನ್ 27: ಮಂಗಳೂರು ಪಿಲಿಕುಳ ಜೈವಿಕ ಉದ್ಯಾನವನದಲ್ಲಿ 10 ಬಾರ್ಕಿಂಗ್ ಡೀರ್ (ಕಾಡುಕುರಿ) ಗಳು ಬೀದಿ ನಾಯಿಗಳ ಹಿಂಡಿನ ದಾಳಿಯಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಪಿಲಿಕುಳ ಜೈವಿಕ ಉದ್ಯಾನವನದ ಬೇಲಿ ಹಾರಿ ಬೀದಿನಾಯಿಗಳು ಕಾಡುಕುರಿ ಹಿಂಡಿನ ಮೇಲೆ ದಾಳಿ ನಡೆಸಿವೆ. ಬೀದಿ ನಾಯಿಗಳ ದಾಳಿಯಿಂದ ಹತ್ತು ಕಾಡುಕುರಿಗಳು ಸಾವನ್ನಪ್ಪಿ, 5ಕ್ಕೂ ಹೆಚ್ಚಿನ ಕಾಡುಕುರಿಗಳು ಗಂಭೀರವಾಗಿ ಗಾಯಗೊಂಡಿವೆ.
ಪಿಲಿಕುಳ ನಿಸರ್ಗಧಾಮದ ಬಳಿಯಿರುವ ಡಂಪಿಂಗ್ ಯಾರ್ಡ್ ನಿಂದ ಜಿಗಿದು ಬೀದಿ ನಾಯಿಗಳು ನಿಸರ್ಗಧಾಮದ ಒಳ ಪ್ರವೇಶಿಸಿದೆ. ಮಳೆಯಿಂದಾಗಿ ಮರವೊಂದು ಪಿಲಿಕುಳ ಆವರಣ ಗೋಡೆಯ ಮೇಲೆ ಬಿದ್ದ ಪರಿಣಾಮವಾಗಿ ಗೋಡೆ ಜರಿದಿದ್ದು, ಬೀದಿ ನಾಯಿಗಳ ಹಿಂಡು ಆ ಮೂಲಕ ಪಿಲಿಕುಳ ಆವರಣ ಗೋಡೆಯನ್ನು ಹಾರಿ ಕಾಡು ಕುರಿಗಳ ಮೇಲೆ ದಾಳಿ ಮಾಡಿವೆ.
ಕಾಡುಕುರಿಗಳ ಕುತ್ತಿಗೆಗೆ ತೀವ್ರ ಗಾಯವಾಗಿರುವ ಹಿನ್ನಲೆಯಲ್ಲಿ 10 ಕಾಡು ಕುರಿಗಳು ಸಾವನಪ್ಪಿದ್ದು, 5 ಕಾಡು ಕುರಿಗಳಿಗೆ ಗಾಯವಾಗಿದೆ.
ಈ ಕುರಿತು ಪಿಲಿಕುಳ ಜೈವಿಕ ಉದ್ಯಾನ ವನದ ನಿರ್ದೇಶಕ ಜಯಪ್ರಕಾಶ್ ಅವರು ಪ್ರತಿಕ್ರಿಯಿಸಿದ್ದು, ಇಲ್ಲಿ ನಲವತ್ತು ಕಾಡುಕುರಿಗಳು ಇದ್ದವು. ಹತ್ತು ಕುರಿಗಳು ಸಾವನ್ನಪ್ಪಿವೆ. ಗಾಯಗೊಂಡಿರುವ ಕಾಡುಕುರಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನಾವು ಈ ಹಿಂದೆಯೇ ಬಾರ್ಕಿಂಗ್ ಡೀರ್ ಗಳನ್ನು ಕಾಡಿಗೆ ಬಿಡಲು ಚಿಂತನೆ ನಡೆಸಿದ್ದೆವು. ಆದರೆ ನಿನ್ನೆ ರಾತ್ರಿ ಬೀದಿನಾಯಿಗಳ ದಾಳಿಗೆ ಜಿಂಕೆಗಳು ಬಲಿಯಾಗಿವೆ
5 ವರ್ಷಗಳ ಹಿಂದೆ 4 ಕಾಡು ಕುರಿಗಳನ್ನು ರಕ್ಷಿಸಿದ್ದು ಅವುಗಳ ಸಂತಾನೋತ್ಪತ್ತಿಯಿಂದಾಗ 40 ಕಾಡು ಕುರಿಗಳು ಇಲ್ಲಿ ಇದ್ದವು. ನಾವು ಈ ಹಿಂದೆಯೇ 10 ಬಾರ್ಕಿಂಗ್ ಡೀರ್ ಗಳನ್ನು ಇಲ್ಲಿಯೇ ಉಳಿಸಿಕೊಂಡು ಉಳಿದವುಗಳನ್ನು ಕಾಡಿಗೆ ಬಿಡಲು ಚಿಂತನೆ ನಡೆಸಿದ್ದೆವು. ಆದರೆ ದುರದೃಷ್ಟವಶಾತ್ ಬೀದಿ ನಾಯಿಗಳ ದಾಳಿಗೆ 10 ಬಾರ್ಕಿಂಗ್ ಡೀರ್ ಬಲಿಯಾಗಿದ್ದು, ಉಳಿದ 5ಕ್ಕೆ ಗಾಯವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಅವುಗಳು ಗುಣಮುಖವಾದ ಬಳಿಕ 10 ಬಾರ್ಕಿಂಗ್ ಡೀರ್ ಗಳನ್ನು ಉಳಿಸಿಕೊಂಡು ಉಳಿದವುಗಳನ್ನು ಕಾಡಿಗೆ ಬಿಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಪಿಲಿಕುಳ ನಿಸರ್ಗಧಾಮ ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ನಿಸರ್ಗಧಾಮವಾಗಿದೆ.