ಕೋವಿಡ್ ಕಾಲದಲ್ಲಿ 80 ಕೋಟಿ ಜನರಿಗೆ ಉಚಿತ ಧಾನ್ಯ ವಿತರಣೆ – ಪಿಯೂಷ್ ಗೋಯಲ್
ತಂತ್ರಜ್ಞಾನ ಬಳಕೆಯಿಂದ ಪಡಿತರ ವಿತರಣೆ ಪದ್ಧತಿಯಲ್ಲಿ ಸುಧಾರಣೆ ತರಲಾಗಿದ್ದು, ‘ಒಂದು ರಾಷ್ಟ್ರ- ಒಂದು ಪಡಿತರ ‘ ಯೋಜನೆಯಡಿ ಈಗಾಗಲೇ ಶೇಕಡ 98ರಷ್ಟು ಪಡಿತರ ಚೀಟಿಗಳನ್ನು ಫಲಾನುಭವಿಗಳ ಆಧಾರ ಸಂಖ್ಯೆಗೆ ಜೋಡಿಸಲಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರ ಮತ್ತು ಸಾರ್ವಜನಿಕ ವಿತರಣೆ ಖಾತೆ ಸಚಿವ ಪಿಯೂಷ್ ಗೋಯಲ್ ಲೋಕಸಭೆಯಲ್ಲಿಂದು ಹೇಳಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ವಿವರ ನೀಡಿದ ಸಚಿವರು, ನೂತನ ಸುಧಾರಣಾ ಕ್ರಮದಿಂದ ಫಲಾನುಭವಿಗಳು ದೇಶದ ಯಾವುದೇ ಪಡಿತರ ಕೇಂದ್ರದಲ್ಲಿ ತಮ್ಮ ಆಧಾರ ಸಂಖ್ಯೆ ಮತ್ತು ಬೆರಳಿನ ಗುರುತು ನೀಡುವ ಮೂಲಕ ಆಹಾರಧಾನ್ಯ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಕೋವಿಡ್ ಸಂಕಷ್ಟ ಕಾಲದಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ 19 ತಿಂಗಳ ಕಾಲ ಸುಮಾರು 80 ಕೋಟಿ ಜನರಿಗೆ ಸಂಪೂರ್ಣ ಉಚಿತವಾಗಿ ಆಹಾರಧಾನ್ಯ ಪೂರೈಸಲಾಗಿದೆ. ದೇಶದ ಯಾವುದೇ ವ್ಯಕ್ತಿ ಹಸಿವಿನಿಂದ ಬಳಲಬಾರದು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಕಳಕಳಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಸಂಪೂರ್ಣ ಪಾರದರ್ಶಕವಾಗಿ, ಯಾವುದೇ ಭ್ರಷ್ಟಾಚಾರವಿಲ್ಲದೇ ಈ ಯೋಜನೆ ಜಾರಿಗೊಳಿಸಿರುವುದು ಹೆಮ್ಮೆಯ ವಿಷಯ ಎಂದು ಸಚಿವರು ತಿಳಿಸಿದರು.








