ಕೋವಿಡ್-19 ವಿರುದ್ಧ ಹೋರಾಡಲು ಪಿಎಂ ಕೇರ್ಸ್ ಫಂಡ್ ಗೆ 3,076 ಕೋಟಿ ರೂ. ದೇಣಿಗೆ
ಹೊಸದಿಲ್ಲಿ, ಸೆಪ್ಟೆಂಬರ್02: ಕೊರೋನವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಮೋದಿ ಸರ್ಕಾರ ಈ ವರ್ಷ ಮಾರ್ಚ್‌ನಲ್ಲಿ ಸ್ಥಾಪಿಸಿದ ಪಿಎಂ ಕೇರ್ಸ್ ಫಂಡ್ ಮಾರ್ಚ್ 31 ರವರೆಗೆ 3,076 ಕೋಟಿ ರೂ. ದೇಣಿಗೆ ಪಡೆದಿದೆ. ಪಿಎಂ ಕೇರ್ಸ್ ಫಂಡ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಲೆಕ್ಕಪರಿಶೋಧನಾ ವರದಿಯಲ್ಲಿ, ಮಾರ್ಚ್ 31 ರವರೆಗೆ ಭಾರತ ಮತ್ತು ವಿದೇಶದಿಂದ ಸ್ವೀಕರಿಸಲಾಗಿರುವ ಒಟ್ಟು ದೇಣಿಗೆ ಕುರಿತು ಘೋಷಣೆ ಮಾಡಲಾಗಿದೆ.
ಪಿಎಂ ಕೇರ್ಸ್ ಸೈಟ್ನಲ್ಲಿ ಸಾರ್ವಜನಿಕವಾಗಿ ಪ್ರಕಟಿಸಲಾದ ಲೆಕ್ಕಪರಿಶೋಧನೆಯ ವರದಿಯ ಪ್ರಕಾರ, 30,76,62,58,096 ರೂಗಳು ಪ್ರಧಾನ ಮಂತ್ರಿ ನಾಗರಿಕರ ನೆರವು ಮತ್ತು ತುರ್ತು ಪರಿಸ್ಥಿತಿಯಲ್ಲಿ ಪರಿಹಾರ (ಪಿಎಂ ಕೇರ್ಸ್ ಫಂಡ್) ಗೆ ಸಂಬಂಧಿಸಿರುವ ಬ್ಯಾಂಕ್ ಖಾತೆಯಲ್ಲಿ ಸಂಗ್ರಹವಾದ ದೇಣಿಗೆ. ಆದರೆ, ಮಾರ್ಚ್ ನಂತರ ಪಡೆದ ದೇಣಿಗೆ ಇನ್ನೂ ತಿಳಿದುಬಂದಿಲ್ಲ.
ಕೋವಿಡ್ -19 ರೊಂದಿಗೆ ಹೋರಾಡಲು ಸ್ಥಾಪಿಸಲಾದ ಪಿಎಂ ಕೇರ್ಸ್ ಫಂಡ್‌ನೊಂದಿಗೆ ಹೆಚ್ಚು ಪಾರದರ್ಶಕತೆ ಕೋರಿ ಪ್ರತಿಪಕ್ಷಗಳ ತೀವ್ರ ಟೀಕೆಗಳ ಮತ್ತು ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅನೇಕ ಅರ್ಜಿಗಳ ನಡುವೆ ಇದು ಬಂದಿದ್ದು, ಪಿಎಂ ಮೋದಿ ಮತ್ತು ಸರ್ಕಾರದ ಕೆಲವು ಉನ್ನತ ಮಂತ್ರಿಗಳನ್ನು ಅದರ ಟ್ರಸ್ಟಿಗಳಾಗಿ ಹೊಂದಿದೆ.
2,25,000 ರೂ.ಗಳ ಆರಂಭಿಕ ಮೂಲಧನದೊಂದಿಗೆ ಈ ನಿಧಿಯನ್ನು ಸ್ಥಾಪಿಸಲಾಯಿತು. ಪಿಎಂ ಕೇರ್ಸ್ ಫಂಡ್ ಘೋಷಣೆಯ ನಂತರ, ದೇಶಾದಾದ್ಯಂತ ವಿದೇಶಿ ದೇಣಿಗೆ, ಸೆಲೆಬ್ರಿಟಿ, ರಾಜಕಾರಣಿ, ಸಂಸತ್ ಸದಸ್ಯರು, ಸರ್ಕಾರಿ ಅಧಿಕಾರಿಗಳು ಮತ್ತು ಖಾಸಗಿ ದಾನಿಗಳ ದೇಣಿಗೆಗಳಿಂದ ದೊಡ್ಡ ಮೊತ್ತದಲ್ಲಿ ಸಂಗ್ರಹವಾಯಿತು.
ದೇಶಾದ್ಯಂತ ಕೊರೋನವೈರಸ್ ಆರೈಕೆಗಾಗಿ ‘ಮೇಡ್ ಇನ್ ಇಂಡಿಯಾ’ ವೆಂಟಿಲೇಟರ್‌ಗಳನ್ನು ಸಂಗ್ರಹಿಸಲು ಮೇ ತಿಂಗಳಲ್ಲಿ ಪಿಎಂ ಕೇರ್ಸ್ ಫಂಡ್‌ನಿಂದ 3,000 ಕೋಟಿ ರೂ ಬಿಡುಗಡೆ ಮಾಡಲಾಗಿದೆ.
ಕಳೆದ ವಾರ, ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು ಪಿಎಂ ಕೇರ್ಸ್ ಫಂಡ್‌ನಿಂದ ಪಡೆದ ಹಣವನ್ನು ಘೋಷಿಸುವಂತೆ ಕೋರಿ ಸಲ್ಲಿಸಿದ ಪಿಐಎಲ್ ವಜಾಗೊಳಿಸಿತ್ತು. ನ್ಯಾಯಮೂರ್ತಿಗಳಾದ ಸುನಿಲ್ ಶುಕ್ರೆ ಮತ್ತು ಅನಿಲ್ ಕಿಲೋರ್ ಅವರ ವಿಭಾಗೀಯ ಪೀಠವು ಸಾರ್ವಜನಿಕವಾಗಿ ಹಣವನ್ನು ಬಹಿರಂಗಪಡಿಸುವ ಉದ್ದೇಶವು ಅವುಗಳ ಸರಿಯಾದ ಬಳಕೆಯನ್ನು ಖಚಿತಪಡಿಸಿಕೊಳ್ಳುವುದು ಎಂದು ಸಲಹೆಯನ್ನು ನೀಡಿದ್ದರು.