ಬೆಂಗಳೂರು, ಮೇ 25 : ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ರಂಜಾನ್ ಹಬ್ಬದ ಶುಭಾಶಯ ಸಂದೇಶ ರವಾನಿಸಿದ್ದಾರೆ. ಪ್ರಧಾನಿ ಮೋದಿ ಈ ಕುರಿತು ಟ್ವೀಟ್ ಮಾಡಿದ್ದು, ಈದ್ ಹಬ್ಬದ ಈ ಶುಭ ಸಂದರ್ಭದಲ್ಲಿ ನಾನು ದೇಶವಾಸಿಗಳಿಗೆ ಶುಭಾಶಯದ ಸಂದೇಶ ತಿಳಿಸಬಯಸುತ್ತೇನೆ. ಈ ಪವಿತ್ರ ಹಬ್ಬ ವಿಶ್ವ ಭ್ರಾತೃತ್ವ, ಸಾಮರಸ್ಯವನ್ನು ಇನ್ನಷ್ಟು ಹೆಚ್ಚಿಸಲಿ ಎಂದು ಹಾರೈಸಿರುವ ಪ್ರಧಾನಿ ಮೋದಿ, ಎಲ್ಲರ ಆರೋಗ್ಯಕ್ಕಾಗಿ ಪ್ರಾರ್ಥಿಸುವುದಾಗಿ ಹೇಳಿದ್ದಾರೆ. ಇನ್ನು ರಂಜಾನ್ ಹಬ್ಬದ ಪ್ರಯುಕ್ತ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ.
‘ಶಾಂತಿ, ಸೌಹಾರ್ದ ಮತ್ತು ಸಹಬಾಳ್ವೆಯ ಪ್ರತೀಕವಾಗಿರುವ ಈ ಹಬ್ಬವು ಬದುಕಿನಲ್ಲಿ ನೆಮ್ಮದಿ, ಸಂತೋಷ ತರಲಿ. ರಂಜಾನ್ ತಿಂಗಳಲ್ಲಿ ಕೋವಿಡ್ 19 ಸೋಂಕು ನಿಯಂತ್ರಣಕ್ಕಾಗಿ ಮನೆಯಲ್ಲೇ ಪ್ರಾರ್ಥನೆ ನಡೆಸಿ, ಮುನ್ನೆಚ್ಚರಿಕೆ ವಹಿಸಿ ಸಹಕರಿಸಿದ ಎಲ್ಲ ಮುಸಲ್ಮಾನ ಬಂಧುಗಳಿಗೆ ಅಭಿನಂದನೆಗಳು,’ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಶುಭಾಶಯ ತಿಳಿಸಿದ್ದಾರೆ. ಈ ಬಾರಿ ದೇಶ ಕೊರೋನಾ ವೈರಸ್ ಸೋಂಕಿನ ವಿರುದ್ಧ ಹೋರಾಟದಲ್ಲಿ ನಿರತವಾಗಿರುವುದರಿಂದ ಮತ್ತು ಲಾಕ್ ಡೌನ್ ಜಾರಿಯಲ್ಲಿ ಇರುವುದರಿಂದ ಮುಸ್ಲಿಂ ಬಾಂಧವರು ತಮ್ಮ ಮನೆಗಳಲ್ಲಿ ರಂಜಾನ್ ಹಬ್ಬ ಆಚರಿಸುತ್ತಿದ್ದಾರೆ.








