ಬೆಂಗಳೂರು: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಹಾಗೂ ಬೆಳಗಾವಿ ಸಂಸದ ಸುರೇಶ್ ಅಂಗಡಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಜಕೀಯ ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸುರೇಶ್ ಅಂಗಡಿ ಬಿಜೆಪಿಯ ವಿಶೇಷ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಸದೃಢಗೊಳಿಸಲು ಸಾಕಷ್ಟು ಪರಿಶ್ರಮ ವಹಿಸಿದ್ದರು. ಸುರೇಶ್ ಅಂಗಡಿ ಪ್ರಾಮಾಣಿಕ ಕಾರ್ಯಕರ್ತ ಹಾಗೂ ಸಕ್ರಿಯ ಸಚಿವರಾಗಿ ಕೆಲಸ ಮಾಡುತ್ತಿದ್ದರು.
ಸುರೇಶ್ ಅಂಗಡಿ ಅವರ ಸಾವು ತೀವ್ರ ಆಘಾತ ತಂದಿದೆ. ಅವರ ಸಾವಿನ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳಿಗೆ ನೀಡಲಿ. ಓಂ ಶಾಂತಿ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವಿಟರ್‍ನಲ್ಲಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಂತಾಪ
ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸುರೇಶ್ ಅಂಗಡಿ ಅವರ ಅಕಾಲಿಕ ನಿಧನ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಸಭ್ಯ, ಸೌಮ್ಯ ಸ್ವಭಾವದವರಾಗಿ ಜನಪ್ರಿಯ ನಾಯಕರಾಗಿದ್ದ ಸುರೇಶ್ ಅಂಗಡಿ ಅವರ ನಿಧನ ಪಕ್ಷಕ್ಕೆ, ರಾಜ್ಯಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಬಹುದೊಡ್ಡ ನಷ್ಟವಾಗಿದೆ.
ಸುರೇಶ್ ಅಂಗಡಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸುತ್ತಾ, ಭಗವಂತ ಅವರ ಆತ್ಮಕ್ಕೆ ಸದ್ಗತಿಯನ್ನು ನೀಡಲಿ. ಅವರ ಕುಟುಂಬ ವರ್ಗದವರಿಗೆ, ಬಂಧು ವರ್ಗದವರಿಗೆ ಅಪಾರ ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ, ಓಂ ಶಾಂತಿ ಎಂದು ಟ್ವಿಟರ್‍ನಲ್ಲಿ ಬಿಎಸ್‍ವೈ ಸಂತಾಪ ಸೂಚಿಸಿದ್ದಾರೆ.
ಸಿದ್ದು, ದೇವೇಗೌಡ ಸಂತಾಪ
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ನಿಧನಕ್ಕೆ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸುರೇಶ್ ಅಂಗಡಿಯವರ ಸಾವು ಆಘಾತಕಾರಿಯಾದುದು. ಸ್ನೇಹಜೀವಿಯಾಗಿದ್ದ ಸುರೇಶ್ ಅಂಗಡಿ, ರಾಜ್ಯದ ಅಭಿವೃದ್ಧಿ ಬಗ್ಗೆ ಅಪಾರ ಕಾಳಜಿ ಉಳ್ಳವರಾಗಿದ್ದರು. ಅವರ ಕುಟುಂಬ ವರ್ಗಕ್ಕೆ ನನ್ನ ಸಂತಾಪಗಳು. ಅವರ ಶೋಕದಲ್ಲಿ ನಾನು ಭಾಗಿಯಾಗಿದ್ದೇನೆ ಎಂದು ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಸುರೇಶ್ ಅಂಗಡಿ ನಿಧನ ಸುದ್ದಿ ಕೇಳಿ ನನಗೆ ಶಾಕ್ ಆಯಿತು. ಅವರು ನನಗೆ ಕಿರಿಯ ಸೋದರನ ಸಮಾನರಾಗಿದ್ದರು. ಅವರನ್ನು ಕಳೆದುಕೊಂಡು ದೇಶ ಬಡವಾಗಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಸಂತಾಪ ಸೂಚಿಸಿದ್ದಾರೆ.