Pm Modi in Kerala: ದೇಶದ ಪ್ರಗತಿ, ಯುವಜನತೆಯ ಆಕಾಂಕ್ಷೆಗೆ ಭ್ರಷ್ಚಾಚಾರ ಅಡ್ಡಿ – ಪ್ರಧಾನಿ
ಎಲ್ಲರೊಂದಿಗೆ ಎಲ್ಲರ ವಿಶ್ವಾಸ, ಎಲ್ಲರ ವಿಕಾಸ ಮತ್ತು ಎಲ್ಲರ ಪ್ರಯತ್ನ ಎಂಬ ಮಂತ್ರದೊಂದಿಗೆ ಮುನ್ನಡೆಯುತ್ತಿರುವ ಬಿಜೆಪಿ ಸರ್ಕಾರ ದೊಡ್ಡ ಸಂಕಲ್ಪಗಳನ್ನು ಕೈಗೊಂಡು, ಅದನ್ನು ಸಾಕಾರಗೊಳಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಕೇರಳ- ಕರ್ನಾಟಕ ಎರಡು ದಿನಗಳ ಪ್ರವಾಸದ ಮೊದಲ ಚರಣದಲ್ಲಿಂದು, ಕೊಚ್ಚಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು, ಭಾರತ 75 ವರ್ಷಗಳ ಸ್ವಾತಂತ್ರ್ಯವನ್ನು ಪೂರೈಸಿದ್ದು, ಮುಂದಿನ 25 ವರ್ಷಗಳ ಅಮೃತ ಕಾಲದಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಮಾಡುವ ನಿಟ್ಟಿನಲ್ಲಿ, ತಮ್ಮ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ತಿಳಿಸಿದರು.
ಓಣಂ ಸಂದರ್ಭದಲ್ಲಿ ತಾವು ಕೇರಳಕ್ಕೆ ಆಗಮಿಸಿರುವುದು ವಿಶೇಷ ಎಂದ ಅವರು, ಎಲ್ಲರಿಗೂ ಓಣಂ ಶುಭ ಕೋರಿದರು. ಬಡವರು, ದಲಿತರು, ಪೀಡಿತರು, ಶೋಷಿತರು, ವಂಚಿತರು, ಆದಿವಾಸಿಗಳು, ಎಲ್ಲರಿಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ತಮ್ಮ ಸರ್ಕಾರದ ಪ್ರಥಮ ಆದ್ಯತೆಯಾಗಿದೆ. ಕೇರಳ ಜನರ ಆಸೆ-ಆಕಾಂಕ್ಷೆಗಳಿಗೆ ಕೇಂದ್ರ ಎನ್ ಡಿಎ ಸರ್ಕಾರ, ಸಂವೇದನಾಶೀಲವಾಗಿದೆ ಎಂದರು.
ಸರ್ಕಾರ, ದೇಶದ ಪ್ರತಿ ಬಡವರಿಗೂ ಪಕ್ಕಮನೆಗಳನ್ನು ನೀಡುವ ಅಭಿಯಾನ ಆರಂಭಿಸಿದೆ. ಪ್ರಧಾನ ಮಂತ್ರಿ ವಸತಿ ಯೋಜನೆಯಡಿ, ಕೇರಳದ ಬಡವರಿಗೂ ಸುಮಾರು 2 ಲಕ್ಷ ಮನೆ ಮಂಜೂರು ಮಾಡಲಾಗಿದ್ದು, ಈ ಪೈಕಿ ಒಂದು ಲಕ್ಷದ 30 ಸಾವಿರ ಮನೆಗಳು ಪೂರ್ಣಗೊಂಡಿವೆ ಎಂದರು.
ಆದಿ ಶಂಕರಾಚಾರ್ಯರು ಭಾರತವನ್ನು ಒಂದು ಸೂತ್ರದಲ್ಲಿ ಒಗ್ಗೂಡಿಸಿದರು. ಅದು ಇಂದಿಗೂ ಭಾರತದಲ್ಲಿ ಒಗ್ಗಟ್ಟು ನೆಲೆಸುವಂತೆ ಮಾಡಿದೆ. ತಮಗೆ ಶಂಕರಾಚಾರ್ಯರ ಜನ್ಮಸ್ಥಳಕ್ಕೆ ಭೇಟಿ ನೀಡುವ ಸೌಭಾಗ್ಯ ದೊರೆತಿದೆ ಎಂದರು. ನಂತರ ಪ್ರಧಾನಿ ಆದಿ ಶಂಕರಾಚಾರ್ಯರ ಜನ್ಮಸ್ಥಳ ಕಾಲಡಿಗೆ ತೆರಳಿ, ದೇವರ ದರ್ಶನ ಪಡೆದರು.








