ನವದೆಹಲಿ: ದೇಶಾದ್ಯಂತ ಲಾಕ್‌ಡೌನ್ ವೇಳೆ ಅನ್ಯರಾಜ್ಯಗಳಲ್ಲಿ ಸಿಲುಕಿ ಹುಟ್ಟೂರಿಗೆ ಮರಳಿದ ಬಳಿಕ ಕೆಲಸವಿಲ್ಲದೆ ಪರದಾಡುತ್ತಿರುವ ವಲಸೆ ಕಾರ್ಮಿಕರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ಆತ್ಮನಿರ್ಭರ್ ರೋಜ್‌ಗಾರ್ ಅಭಿಯಾನ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.

ಉತ್ತರ ಪ್ರದೇಶ ಸರ್ಕಾರ ಆರಂಭಿಸಿರುವ ರೋಜಗಾರ್ ಯೋಜನೆಗೆ ದೆಹಲಿಯಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಚಾಲನೆ ನೀಡಿದರು. ಈ ವೇಳೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಪಸ್ಥಿತರಿದ್ದರು.
ಈ ಯೋಜನೆಗೆ ಉತ್ತರ ಪ್ರದೇಶದ ೩೧ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಲಾಕ್‌ಡೌನ್ ಬಳಿಕ ಹುಟ್ಟೂರಿಗೆ ಆಗಮಿಸಿರುವ ೩೦ ಲಕ್ಷ ವಲಸೆ ಕಾರ್ಮಿಕರಿಗಾಗಿ ಈ ಯೋಜನೆ ಆರಂಭಿಸಲಾಗಿದೆ.
೧.೨೫ ಕೋಟಿ ವಲಸೆ ಕಾರ್ಮಿಕರಿಗೆ ಕೆಲಸ..!
ಆತ್ಮನಿರ್ಭರ್ ರೋಜಗಾರ್ ಯೋಜನೆಯಡಿ ಹುಟ್ಟೂರುಗಳಿಗೆ ಮರಳಿರುವ ೧.೨೫ ಕೋಟಿ ವಲಸೆ ಕಾರ್ಮಿಕರಿಗೆ ಉದ್ಯೋಗ ಹಾಗೂ ಸ್ವಯಂ ಉದ್ಯೋಗ ಕಲ್ಪಿಸಿಕೊಡಲಾಗುತ್ತಿದೆ.
ಇಂದಿನಿAದ ೧೨೫ ದಿನಗಳ ಕಾಲ ನಡೆಯಲಿರುವ ಈ ಅಭಿಯಾನದಲ್ಲಿ ವಲಸೆ ಕಾರ್ಮಿಕರಿಗೆ ಅವರ ಊರುಗಳಲ್ಲೇ ನರೇಗಾ ಯೋಜನಡಿ ಕೆಲಸ ಹಾಗೂ ಕೌಶಲ್ಯ ಹೊಂದಿರುವವರಿಗೆ ಈ ಯೋಜನೆ ಮೂಲಕ ಸ್ವಯಂ ಉದ್ಯೋಗ ಆರಂಭಿಸಲು ನೆರವು ನೀಡಲಾಗುತ್ತಿದೆ.
ಸ್ಥಳೀಯವಾಗಿ ಉದ್ದಿಮೆಗಳ ಜತೆ ಸಹಕಾರ ಕಲ್ಪಿಸುವುದು ಹಾಗೂ ಸ್ವಯಂ ಉದ್ಯೋಗವಕಾಶಗಳನ್ನು ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಕಳೆದ ವಾರವಷ್ಟೇ ೬ ರಾಜ್ಯಗಳ ೧೧೬ ಜಿಲ್ಲೆಗಳಲ್ಲಿ ವಲಸೆ ಕಾರ್ಮಿಕರಿಗಾಗಿ ಆರಂಭಿಸಿದ್ದ ಗರೀಬ್ ಕಲ್ಯಾಣ್ ರೋಜಗಾರ್ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ಕೊಟ್ಟಿದ್ದರು.







