ಭಾರತ-ಚೀನಾ ಗಡಿವಿವಾದದ ನಡುವೆ ರಾಷ್ಟ್ರಪತಿಯನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
ಹೊಸದಿಲ್ಲಿ, ಜುಲೈ 6: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯಗಳ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿದ್ದಾರೆ. ಪ್ರಧಾನಮಂತ್ರಿಯು ಕಾಲಕಾಲಕ್ಕೆ ರಾಷ್ಟ್ರಪತಿಯನ್ನು ಭೇಟಿಯಾಗುವುದು ಮತ್ತು ಸಮಸ್ಯೆಗಳ ಬಗ್ಗೆ ಮೌಲ್ಯಮಾಪನ ಮಾಡುವುದು ಪ್ರಮಾಣಿತ ಅಭ್ಯಾಸವಾಗಿದ್ದರೂ, ಸುಮಾರು ಎರಡು ತಿಂಗಳಿನಿಂದ ನಡೆಯುತ್ತಿರುವ ಭಾರತ-ಚೀನಾ ನಡುವಿನ ಸಂಘರ್ಷದ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿಯಾಗಿರುವುದು ಭಾರೀ ಕುತೂಹಲ ಮೂಡಿಸಿದೆ.

ಎರಡು ದಿನಗಳ ಹಿಂದೆ ಪ್ರಧಾನಿ ಮೋದಿಯವರು ಲಡಾಖ್ ಗೆ ಧಿಡೀರ್ ಭೇಟಿ ನೀಡಿ ನಿಮುನಲ್ಲಿ ಸೈನಿಕರೊಂದಿಗೆ ಸಂವಾದ ಸಭೆ ನಡೆಸಿದ್ದರು. ಜೂನ್ 15 ರಂದು ಗಾಲ್ವಾನ್‌ನಲ್ಲಿ ನಡೆದ ಘರ್ಷಣೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಯೋಧರನ್ನು ಕೂಡ ಪ್ರಧಾನಿ ಮೋದಿ ಭೇಟಿಯಾಗಿದ್ದರು. ಅಷ್ಟೇ ಅಲ್ಲ ಭಾರತದ ಗಡಿ ಪ್ರದೇಶಗಳ ಮೇಲಿನ ಚೀನಾ ದಾಳಿಯನ್ನು ವಿರೋಧಿಸಿ ಭಾರತದಲ್ಲಿ 59 ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸುವಂತಹ ಕ್ರಮಗಳನ್ನು ಸರ್ಕಾರ ಕೈಗೊಂಡಿತ್ತು.
ಹಾಗಾಗಿ ಪ್ರಧಾನಿ ಮೋದಿ ರಾಷ್ಟ್ರಪತಿ ಕೋವಿಂದ್ ಜೊತೆಗೆ ಪ್ರಸ್ತುತ ವಿದ್ಯಮಾನಗಳ ಕುರಿತು ಸುದೀರ್ಘ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ರಾಷ್ಟ್ರಪತಿ ಭವನ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಪ್ರಸ್ತುತ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿದ್ಯಮಾನಗಳ ಕುರಿತು ಇಬ್ಬರೂ ನಾಯಕರು ಚರ್ಚೆ ನಡೆಸಿದ್ದಾರೆ ಎಂದು ತಿಳಿಸಿದೆ.








