ಉಡುಪಿ: ಕರಾವಳಿಯ ಪುಣ್ಯಕ್ಷೇತ್ರ, ಅನ್ನಬ್ರಹ್ಮ ಮತ್ತು ನಾದಬ್ರಹ್ಮ ನೆಲೆಸಿರುವ ರಜತಪೀಠಪುರ ಉಡುಪಿಯಲ್ಲಿ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದ ಲಕ್ಷಕಂಠ ಭಗವದ್ಗೀತಾ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೃಷ್ಣನ ನಾಡಿನ ಭವ್ಯ ಪರಂಪರೆಯನ್ನು ಕೊಂಡಾಡಿದ್ದಾರೆ. ಶ್ರೀಕೃಷ್ಣನ ದರ್ಶನ ಪಡೆದು, ಗೀತಾ ಪಾರಾಯಣದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ, ಅಯೋಧ್ಯೆಯ ರಾಮಮಂದಿರ ನಿರ್ಮಾಣದಲ್ಲಿ ಉಡುಪಿಯ ಧಾರ್ಮಿಕ ಮುಖಂಡರ ಪಾತ್ರವನ್ನು ಸ್ಮರಿಸಿ ಭಾವನಾತ್ಮಕವಾಗಿ ಮಾತನಾಡಿದರು. ಇದೇ ವೇಳೆ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಮೋದಿ ಅವರಿಗೆ ಭಾರತ ಭಾಗ್ಯವಿದಾತ ಎಂಬ ಬಿರುದು ನೀಡಿ ಗೌರವಿಸಿದರು.
ಉಡುಪಿಗೆ ಆಗಮಿಸಿದ ಪ್ರಧಾನಿ ಮೋದಿ ಅವರು ಮೊದಲು ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಪಡೆದರು. ದಾಸಶ್ರೇಷ್ಠ ಕನಕದಾಸರಿಗೆ ನಮನ ಸಲ್ಲಿಸುವ ಅವಕಾಶ ದೊರೆತದ್ದು ನನ್ನ ಸೌಭಾಗ್ಯ ಎಂದು ಮೋದಿ ಬಣ್ಣಿಸಿದರು. ಬಳಿಕ ಲಕ್ಷಕಂಠ ಗೀತಾ ಪಾರಾಯಣ ವೇದಿಕೆಗೆ ಆಗಮಿಸಿದ ಅವರು, ಲಕ್ಷಾಂತರ ಭಕ್ತರೊಂದಿಗೆ ಸೇರಿ ಸುಮಾರು 7 ನಿಮಿಷಗಳ ಕಾಲ ಭಗವದ್ಗೀತೆಯ ಶ್ಲೋಕಗಳನ್ನು ಪಠಿಸಿದರು. ಕಲಿಯುಗದಲ್ಲಿ ಭಗವಂತನ ನಾಮಸ್ಮರಣೆಯಿಂದ ಮಾತ್ರ ಮೋಕ್ಷ ಸಾಧ್ಯವಿದ್ದು, ಈ ಪಾರಾಯಣ ಹೊಸ ಶಕ್ತಿಯನ್ನು ತುಂಬಿದೆ ಎಂದು ಹೇಳಿದರು.
ರಾಮಮಂದಿರ ಹೋರಾಟದಲ್ಲಿ ಉಡುಪಿಯ ಸಿಂಹಪಾಲು
ತಮ್ಮ ಭಾಷಣವನ್ನು ಕನ್ನಡದಲ್ಲೇ ಜೈ ಶ್ರೀಕೃಷ್ಣ ಎಂದು ಆರಂಭಿಸಿದ ಮೋದಿ, ಅಯೋಧ್ಯೆ ಮತ್ತು ಉಡುಪಿಗಿರುವ ಧಾರ್ಮಿಕ ನಂಟನ್ನು ಬಿಚ್ಚಿಟ್ಟರು. ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಮತ್ತು ಧರ್ಮ ಧ್ವಜದ ಸ್ಥಾಪನೆಯ ಹಿಂದೆ ಉಡುಪಿಯ ಪೇಜಾವರ ಮಠದ ದಿವಂಗತ ವಿಶ್ವೇಶ ತೀರ್ಥ ಸ್ವಾಮೀಜಿಯವರ ಹೋರಾಟ ಮತ್ತು ಮಾರ್ಗದರ್ಶನವನ್ನು ಇಡೀ ವಿಶ್ವವೇ ಅರಿತಿದೆ ಎಂದು ಸ್ಮರಿಸಿದರು. ಅಯೋಧ್ಯೆಯಿಂದ ಉಡುಪಿಯವರೆಗೆ ಅಸಂಖ್ಯಾತ ರಾಮಭಕ್ತರಿದ್ದು, ರಾಮಮಂದಿರ ನಿರ್ಮಾಣವು ಉಡುಪಿಗೆ ಮತ್ತೊಂದು ಹೆಮ್ಮೆಯ ವಿಷಯವಾಗಿದೆ. ಅದೇನೆಂದರೆ, ಅಯೋಧ್ಯೆಯ ರಾಮಮಂದಿರ ಪರಿಷತ್ತಿನ ದ್ವಾರವೊಂದಕ್ಕೆ ದ್ವೈತ ಸಿದ್ಧಾಂತದ ಪ್ರತಿಪಾದಕರಾದ ಜಗದ್ಗುರು ಮಧ್ವಾಚಾರ್ಯರ ಹೆಸರನ್ನು ಇಡಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ದ್ವಾರಕಾಧೀಶನಿಂದ ಉಡುಪಿ ಕೃಷ್ಣನವರೆಗೆ
ತಮ್ಮ ತವರು ರಾಜ್ಯ ಗುಜರಾತ್ ಮತ್ತು ಉಡುಪಿಯ ನಡುವಿನ ಅವಿನಾಭಾವ ಸಂಬಂಧವನ್ನು ಪ್ರಸ್ತಾಪಿಸಿದ ಮೋದಿ, ನಾನು ದ್ವಾರಕೆಯಲ್ಲಿ ಶ್ರೀಕೃಷ್ಣನ ದರ್ಶನ ಪಡೆದಿದ್ದೆ, ಇಂದು ಉಡುಪಿಯಲ್ಲಿ ಕೃಷ್ಣನ ದರ್ಶನ ಪಡೆದಿದ್ದೇನೆ. ಇದು ನನಗೆ ವಿಶಿಷ್ಟ ಅನುಭೂತಿ ನೀಡಿದೆ. ಹಿಂದೆ ಸ್ವಚ್ಛತಾ ಅಭಿಯಾನದಲ್ಲಿ ಉಡುಪಿ ಮೊದಲ ಸ್ಥಾನ ಪಡೆದಿತ್ತು. ಇದು ಬಿಜೆಪಿಯ ದಿವಂಗತ ನಾಯಕ ವಿ.ಎಸ್. ಆಚಾರ್ಯರ ಕರ್ಮಭೂಮಿಯಾಗಿದ್ದು, ಪಕ್ಷಕ್ಕೆ ಅವರ ಕೊಡುಗೆ ಅಪಾರ ಎಂದು ಸ್ಮರಿಸಿದರು.
ಭಯೋತ್ಪಾದನೆ ವಿರುದ್ಧ ಗುಡುಗಿದ ಪ್ರಧಾನಿ
ಕಾರ್ಯಕ್ರಮದಲ್ಲಿ ದೇಶದ ಸುರಕ್ಷತೆಯ ಬಗ್ಗೆಯೂ ಮಾತನಾಡಿದ ಮೋದಿ, ಪಕ್ಕದ ರಾಷ್ಟ್ರ ಪಾಕಿಸ್ತಾನಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು. ಪೆಹಲ್ಗಾಮ್ ಘಟನೆಯಲ್ಲಿ ಕರ್ನಾಟಕದ ಯೋಧರೂ ಹುತಾತ್ಮರಾಗಿದ್ದರು. ಹಿಂದಿನ ಸರ್ಕಾರಗಳು ಉಗ್ರ ಕೃತ್ಯಗಳಾದಾಗ ಮೌನವಾಗಿದ್ದವು. ಆದರೆ ನಮ್ಮ ಸರ್ಕಾರ ಕೈ ಕಟ್ಟಿ ಕೂರಲಿಲ್ಲ. ಆಪರೇಷನ್ ಸಿಂಧೂರ ಮೂಲಕ ತಕ್ಕ ಉತ್ತರ ನೀಡಿದ್ದೇವೆ. ಭಯೋತ್ಪಾದನೆಯನ್ನು ನಾವು ಸಹಿಸುವುದಿಲ್ಲ ಎಂದು ಖಡಕ್ ಸಂದೇಶ ರವಾನಿಸಿದರು.
ದೇಶವಾಸಿಗಳಿಗೆ ಮೋದಿ ನೀಡಿದ 9 ನವ ಸಂಕಲ್ಪಗಳು
ದೇಶದ ಅಭಿವೃದ್ಧಿ ಮತ್ತು ವರ್ತಮಾನ ಹಾಗೂ ಭವಿಷ್ಯದ ದೃಷ್ಟಿಯಿಂದ ಪ್ರತಿಯೊಬ್ಬ ಪ್ರಜೆಯೂ ಒಂಭತ್ತು ಸಂಕಲ್ಪಗಳನ್ನು ಕೈಗೊಳ್ಳುವಂತೆ ಪ್ರಧಾನಿ ಮೋದಿ ಕರೆ ನೀಡಿದರು.
1. ಜಲಸಂರಕ್ಷಣೆ: ನೀರಿನ ಪ್ರತಿಯೊಂದು ಹನಿಯನ್ನು ಉಳಿಸುವ ಪ್ರತಿಜ್ಞೆ.
2. ಪರಿಸರ ಕಾಳಜಿ: ಏಕ್ ಪೇಡ್ ಮಾ ಕೆ ನಾಮ್ (ತಾಯಿಯ ಹೆಸರಲ್ಲಿ ಒಂದು ಮರ) ಅಭಿಯಾನದ ಮೂಲಕ ಗಿಡ ನೆಡುವುದು.
3. ಬಡವರ ಏಳಿಗೆ: ಪ್ರತಿಯೊಬ್ಬರೂ ಕನಿಷ್ಠ ಒಬ್ಬ ಬಡವನ ಜೀವನ ಮಟ್ಟ ಸುಧಾರಿಸಲು ನೆರವಾಗುವುದು.
4. ಸ್ವದೇಶಿ ಮಂತ್ರ: ವೋಕಲ್ ಫಾರ್ ಲೋಕಲ್ ಅಡಿಯಲ್ಲಿ ಸ್ವದೇಶಿ ವಸ್ತುಗಳನ್ನೇ ಬಳಸುವುದು.
5. ನೈಸರ್ಗಿಕ ಕೃಷಿ: ರಾಸಾಯನಿಕ ಮುಕ್ತ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದು.
6. ಆರೋಗ್ಯ ಮತ್ತು ಆಹಾರ: ಸಿರಿಧಾನ್ಯಗಳ ಬಳಕೆ ಮತ್ತು ಎಣ್ಣೆ ಪದಾರ್ಥಗಳ ಸೇವನೆ ಕಡಿಮೆ ಮಾಡಿ ಆರೋಗ್ಯಪೂರ್ಣ ಜೀವನ ನಡೆಸುವುದು.
7. ಯೋಗಾಭ್ಯಾಸ: ಪ್ರತಿಯೊಬ್ಬರೂ ಯೋಗವನ್ನು ದೈನಂದಿನ ಜೀವನದ ಭಾಗವಾಗಿಸಿಕೊಳ್ಳುವುದು.
8. ಪರಂಪರೆ ಉಳಿಸಿ: ಪ್ರಾಚೀನ ಹಸ್ತಪ್ರತಿಗಳ ಸಂರಕ್ಷಣೆಗೆ ಸಹಯೋಗ ನೀಡುವುದು.
9. ತೀರ್ಥಯಾತ್ರೆ: ದೇಶದ ಕನಿಷ್ಠ 25 ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ ದರ್ಶನ ಪಡೆಯುವ ಸಂಕಲ್ಪ ಮಾಡುವುದು.
![{"remix_data":[],"remix_entry_point":"challenges","source_tags":["local"],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{"transform":1},"is_sticker":false,"edited_since_last_sticker_save":true,"containsFTESticker":false,"used_sources":{"version":1,"sources":[{"id":"334294928044211","type":"ugc"}]}}](https://saakshatv.com/wp-content/uploads/2025/11/Picsart_25-11-29_06-46-14-770-750x500.jpg)







