ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಉದ್ಯಮಿ ಎಲೋನ್ ಮಸ್ಕ್ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ.
ಹೀಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಎಲೋನ್ ಮಸ್ಕ್ (Elon Musk) ಮಾಲೀಕತ್ವದ ಸ್ಪೇಸ್‌ಎಕ್ಸ್ (Space X) ಕಂಪನಿಯ ರಾಕೆಟ್ ಬಳಸಿ ಉಪಗ್ರಹವನ್ನು ಕಕ್ಷೆಗೆ ಸೇರಿಸಲಿದೆ. ಇಸ್ರೋದ ಸಂವಹನ ಉಪಗ್ರಹವನ್ನು ಸ್ಪೇಸ್‌ಎಕ್ಸ್‌ನ ಫಾಲ್ಕನ್ 9 ರಾಕೆಟ್ (Space X Falcon 9 Rocket) ನಭಕ್ಕೆ ಸಾಗಿಸಲಿದೆ. ಅಮೆರಿಕದ ಕೇಪ್ ಕೆನವೆರಲ್ ಉಡಾವಣಾ ಕೇಂದ್ರದಿಂದ ಉಡಾವಣೆಯಾಗಲಿದ್ದು, ಈ ಉಡಾವಣೆಗೆ ಅಂದಾಜು 60-70 ಮಿಲಿಯನ್ ಡಾಲರ್ ಖರ್ಚಾಗಲಿದೆ ಎನ್ನಲಾಗಿದೆ.
GSAT-N2 ಅಥವಾ GSAT-20 ಹೆಸರಿನ ಉಪಗ್ರಹವು ಭಾರತದಲ್ಲಿ ವಿಮಾನದಲ್ಲಿ ಇಂಟರ್ನೆಟ್ ಸೇವೆಗಳನ್ನು ಒದಗಿಸಲಿದೆ. ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್‌ನ (ಎನ್‌ಎಸ್‌ಐಎಲ್) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಧಾಕೃಷ್ಣನ್ ದುರೈರಾಜ್ ಅವರು ಸ್ಪೇಸ್‌ಎಕ್ಸ್‌ನೊಂದಿಗೆ ಉಡಾವಣೆ ಮಾಡುವುದಕ್ಕೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.