ನವದೆಹಲಿ : ಭಾರತದಲ್ಲಿ ಕೊರೊನಾ ಸೋಂಕಿನ ಅಟ್ಟಹಾಸ ಜೋರಾಗುತ್ತಿದೆ. ಇದೀಗ ದೇಶದಲ್ಲಿ ಸೋಂಕಿತರ ಸಂಖ್ಯೆ 8 ಲಕ್ಷದ ಗಡಿ ದಾಟಿದೆ. ಇದರ ಮಧ್ಯೆ ಇಂದು ಪ್ರಧಾನಿ ನರೇಂದ್ರ ಮೋದಿ ದೇಶದ ಕೋವಿಡ್ -19 ಪರಿಸ್ಥಿತಿ ಕುರಿತು ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಪರಿಶೀಲನಾ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ಪ್ರಧಾನಿ, ಕೊರೊನಾ ಕುರಿತ ಜಾಗೃತಿ ವ್ಯಾಪಕವಾಗಿ ಹರಡಬೇಕು ಹಾಗೂ ಸೋಂಕು ಹರಡುವಿಕೆಯನ್ನು ತಡೆಗಟ್ಟುವಲ್ಲಿ ನಿರಂತರ ಪ್ರಯತ್ನ ಮಾಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ವೈಯಕ್ತಿಕ ನೈರ್ಮಲ್ಯ ಮತ್ತು ಸಾಮಾಜಿಕ ಶಿಸ್ತು ಪಾಲಿಸುವ ಅಗತ್ಯವನ್ನು ಎತ್ತಿಹಿಡಿದರು. ಅಲ್ಲದೆ ದೆಹಲಿಯಲ್ಲಿ ಸೋಂಕಿನ ಪ್ರಮಾಣದಲ್ಲಿ ನಿಯಂತ್ರಿಸುವಲ್ಲಿ ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಅಧಿಕಾರಿಗಳ ಸಮಗ್ರ ಪ್ರಯತ್ನವನ್ನು ಪ್ರಧಾನಿ ಶ್ಲಾಘಿಸಿದರು.
ಈ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್, ನೀತಿ ಆಯೋಗದ ಅಧಿಕಾರಿ, ಸಂಪುಟ ಕಾರ್ಯದರ್ಶಿ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.







