ಇಂದು ರೈತರಿಗೆ ಒಂದು ಲಕ್ಷ ಕೋಟಿ ರೂಪಾಯಿಗಳ ಹಣಕಾಸು ನೆರವಿನ ಯೋಜನೆಯನ್ನು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಹೊಸದಿಲ್ಲಿ, ಅಗಸ್ಟ್ 9: ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಕೃಷಿ ಮೂಲಸೌಕರ್ಯ ನಿಧಿಯಡಿ (ಅಗ್ರಿ ಇನ್ ಫ್ರಾ ಫಂಡ್) ಇಂದು (ಆಗಸ್ಟ್ 9) ಬೆಳಿಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 1 ಲಕ್ಷ ಕೋಟಿ ರೂ ಹಣಕಾಸು ನೆರವನ್ನು ನೀಡುವ ಯೋಜನೆಯನ್ನು ಉದ್ಘಾಟಿಸಲಿದ್ದಾರೆ.
ಆರನೇ ಕಂತಿನ ಪಿಎಂ-ಕಿಸಾನ್ ಯೋಜನೆಯಡಿ 8.5 ಕೋಟಿ ರೈತರಿಗೆ 17,000 ಕೋಟಿ ರೂ. ರೂಪಾಯಿಗಳ ನೆರವು ದೊರಕಲಿದೆ.
ಈ ಕಾರ್ಯಕ್ರಮಕ್ಕೆ ದೇಶಾದ್ಯಂತ ಲಕ್ಷಾಂತರ ರೈತರು, ಸಹಕಾರಿಗಳು ಮತ್ತು ನಾಗರಿಕರು ಸಾಕ್ಷಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಉಪಸ್ಥಿತರಿರುವರು.

ಬೆಳೆ ಕಟಾವು ಬಳಿಕದ ಕೃಷಿ ಚಟುವಟಿಕೆಗಳನ್ನು ಇನ್ನಷ್ಟು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ರೂಪಿಸಿದೆ.
ಈ ಯೋಜನೆಯು ರೈತರು ಬೆಳೆದ ಬೆಳೆಗಳನ್ನು ಸೂಕ್ತವಾಗಿ ಸಂರಕ್ಷಿಸಿಡಲು ಅಗತ್ಯವಿರುವ ಕೋಲ್ಡ್ ಸ್ಟೋರೇಜ್ ಗಳು, ಉತ್ಪನ್ನ ಸಂಗ್ರಹ ಕೇಂದ್ರಗಳು, ಸಂಸ್ಕರಣಾ ವಿಭಾಗಗಳು ಸೇರಿದಂತೆ ಬೆಳೆಗಳಿಗೆ ಪೂರಕವಾಗಿರುವ ವ್ಯವಸ್ಥೆಗಳನ್ನು ತಳಮಟ್ಟದಲ್ಲಿ ರೂಪಿಸಲು ಸಹಕಾರಿಯಾಗಲಿದೆ ಎಂದು ಪ್ರಧಾನಮಂತ್ರಿಯವರ ಕಛೇರಿ ಮಾಹಿತಿ ನೀಡಿದೆ.

ಈ ಮೂಲಕ ರೈತರು ತಾವು ಬೆಳೆಯುವ ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಮೌಲ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ.
ಇದರಿಂದಾಗಿ ರೈತರು, ತಮ್ಮ ಬೆಳೆಗಳನ್ನು ವೈಜ್ಞಾನಿಕ ರೀತಿಯಲ್ಲಿ ಶೇಖರಿಸಿ ಬಳಿಕ ಮಾರುಕಟ್ಟೆಯಲ್ಲಿ ಅಧಿಕ ಬೇಡಿಕೆಯಿರುವ ಸಂಧರ್ಭದಲ್ಲಿ ಅವುಗಳನ್ನು ಮಾರಾಟ ಮಾಡಬಹುದಾಗಿದೆ.
ಕೃಷಿ ಉತ್ಪನ್ನಗಳಿಗೆ ಬೇಡಿಕೆ ಇಲ್ಲದ ಸಮಯದಲ್ಲಿ ರೈತರು ಸಂಕಷ್ಟಕ್ಕೆ ಒಳಗಾಗುವುದನ್ನು ಇದು ತಪ್ಪಿಸಲು ಸಹಾಯ ಮಾಡಲಿದೆ ಮತ್ತು ಕೃಷಿ ಉತ್ಪನ್ನಗಳ ಸಂಸ್ಕರಣಾ ಗುಣಮಟ್ಟ ಸುಧಾರಣೆಯಾಗಲು ಹಾಗೂ ಅವುಗಳ ಮೌಲ್ಯವರ್ಧನೆಗೆ ಈ ವ್ಯವಸ್ಥೆ ಸಹಕಾರಿಯಾಗಲಿದೆ.








