ಎರಡೂವರೆ ವರ್ಷಗಳಿಂದ ಯುದ್ಧದಿಂದ ಬೆಂದು ಹೋಗಿರುವ ಉಕ್ರೇನ್ ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾರೆ. ಉಕ್ರೇನ್ನ ಕೈವ್ಗೆ ಬಂದಿಳಿದಿರುವ ನಮೋ (Narendra Modi) ಶುಕ್ರವಾರ (ಆ.23) ಅಧ್ಯಕ್ಷ ವ್ಲಾಡಮಿರ್ ಝೆಲೆನ್ಸ್ಕಿ (Volodymyr Zelensky) ಅವರನ್ನು ಭೇಟಿಯಾಗಿ, ಹಲವಾರು ವಿಷಯಗಳ ಕುರಿತು ಚರ್ಚಿಸಿದ್ದಾರೆ.
ಪ್ರಧಾನಿ ಮೋದಿ ಕೈವ್ನ ರೈಲ್ವೆ ನಿಲ್ದಾಕ್ಕೆ ಬಂದಿಳಿಯುತ್ತಿದ್ದಂತೆ ಅಲ್ಲಿನ ಭಾರತೀಯರು ಆತ್ಮೀಯವಾಗಿ ಸ್ವಾಗತ ಕೋರಿದ್ದಾರೆ. ಆನಂತರ ಕೈವ್ ನಲ್ಲಿ (Kyiv) ಭೇಟಿಯಾದ ಉಭಯ ನಾಯಕರು ಪರಸ್ಪರ ಕೈಕುಲುಕಿ ಅಪ್ಪಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್ಗೆ ಭೇಟಿ (PM Modi In UKraine) ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ನಂತರ ಕೈವ್ನಲ್ಲಿ ಭೇಟಿಯಾದ ಉಭಯ ನಾಯಕರು ದ್ವಿಪಕ್ಷೀಯ ಸಭೆ ನಡೆಸಿದ್ದಾರೆ. 30 ವರ್ಷಗಳ ಹಿಂದೆ ಭಾರತ ಮತ್ತು ಉಕ್ರೇನ್ ನಡುವೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದ ನಂತರ ದೇಶಕ್ಕೆ ಕಾಲಿಟ್ಟ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪ್ರಧಾನಿ ಮೋದಿ ಅವರ ಉಕ್ರೇನ್ ಭೇಟಿ ಒಂದು ದಾಖಲೆಯಾಗಿದೆ.
ಈ ವೇಳೆ ರಷ್ಯಾ ದಾಳಿಯಲ್ಲಿ ಹುತಾತ್ಮರಾದವರಿಗೆ ಮೋದಿ ನಮನ ಸಲ್ಲಿಸಿದರು. ಅಲ್ಲದೇ, ಉಭಯ ದೇಶಗಳ ಮಧ್ಯೆ 4 ಒಪ್ಪಂದಗಳಾದವು. ಇದಕ್ಕೂ ಮುನ್ನ, ಮಹಾತ್ಮ ಗಾಂಧಿ ವಿಗ್ರಹಕ್ಕೆ ಪುಷ್ಪ ನಮನ ಸಲ್ಲಿಸಿದ ಮೋದಿ, ಬಾಪೂಜಿ ಆಶಯಗಳು ವಿಶ್ವವ್ಯಾಪಿಯಾಗಿವೆ. ಕೋಟ್ಯಂತರ ಮಂದಿಗೆ ಸ್ಪೂರ್ತಿಯಾಗಿದೆ ಎಂದು ಹೇಳಿದರು.








