ಕೊರೊನಾ ನಿಯಂತ್ರಣದಲ್ಲಿ ಎಡವಿದೆ ಮೋದಿ ಸರ್ಕಾರ – ದಿ ಲ್ಯಾನ್ಸೆಟ್ ವರದಿ
ಅಂತಾರಾಷ್ಟ್ರೀಯ ವೈದ್ಯಕೀಯ ಜರ್ನಲ್ ದಿ ಲ್ಯಾನ್ಸೆಟ್ ತನ್ನ ಸಂಪಾದಕೀಯದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನ ತೀವ್ರವಾಗಿ ಟೀಕಿಸಿದೆ. ಹೌದು… ಕೊರೋನಾ ನಿಯಂತ್ರಣದಲ್ಲಿ ಭಾರತ ತನ್ನ ಆರಂಭಿಕ ಯಶಸ್ಸನ್ನು ಕಳ್ಕೊಂಡಿದೆ. ಇದರ ಹೊಣೆಯನ್ನ ಮೋದಿ ಸರ್ಕಾರ ಸ್ವಯಂ ಪ್ರೇರಿತವಾಗಿ ವಹಿಸಿಕೊಳ್ಳಬಹುದು ಎಂದು ಟೀಕಿಸಿದೆ.
ಕೊರೋನಾ ನಿರ್ವಹಣೆ ಕುರಿತು ಮೋದಿ ಸರ್ಕಾರವನ್ನು ಟೀಕಿಸಿರೋ ಲ್ಯಾನ್ಸೆಟ್ ಮೆಡಿಕಲ್ ಜರ್ನಲ್, ಪ್ರಧಾನಿ ಮೋದಿ ಸರ್ಕಾರ ತನ್ನ ತಪ್ಪುಗಳನ್ನು ಒಪ್ಪಿ ಅದನ್ನು ತಿದ್ದುಕೊಂಡ್ರೆ ಮಾತ್ರವೇ ಭಾರತ ಈ ಸಂಕಷ್ಟದಿಂದ ಹೊರಬರಲು ಸಾಧ್ಯ. ಇಂತಾ ಸಮಯದಲ್ಲೂ ಟೀಕೆ ಮತ್ತು ಮುಕ್ತ ಚರ್ಚೆಗಳನ್ನು ತಡೆಯೋಕೆ ಯತ್ನಿಸಲಾಗ್ತಿದ್ದು, ಭಾರತದ ಸರ್ಕಾರದ ಈ ಕ್ರಮಗಳನ್ನು ಕ್ಷಮಿಸೋಕೂ ಸಾಧ್ಯವಿಲ್ಲ.
ಭಾರತ ಆರಂಭದಲ್ಲಿ ಕೊರೊನಾ ವಿರುದ್ಧ ಯಶಸ್ಸು ಕಂಡರೂ ನಂತರದಲ್ಲಿ ವಿಫಲವಾಯ್ತು. ಕೊರೋನಾ ಟಾಸ್ಕ್ ಫೋರ್ಸ್ ತಿಂಗಳಿಗೆ ಒಮ್ಮೆಯೂ ಸಭೆ ನಡೆಸ್ತಾ ಇರಲಿಲ್ಲ. ಅದರ ಪರಿಣಾಮವನ್ನೇ ನಾವು ಇಂದು ನೋಡ್ತಾ ಇದ್ದೀವಿ ಅಂತ ಸಂಪಾದಕೀಯದಲ್ಲಿ ಹೇಳಲಾಗಿದೆ. ಹಲವು ತಿಂಗಳು ಕೊರೋನಾ ಸಂಖ್ಯೆ ಕಡಿಮೆ ಬಂದಿದ್ದೇ ಬಂದಿದ್ದು, ಮಾರ್ಚ್ ತಿಂಗಳಲ್ಲಿ ಆರೋಗ್ಯ ಸಚಿವ ಹರ್ಷವರ್ಧನ್ ನಾವು ಕೊರೋನಾ ಎಂಡ್ಗೇಮ್ನಲ್ಲಿದ್ದೇವೆ ಅಂತ ಘೋಷಣೆ ಮಾಡಿಬಿಟ್ರು. ಎರಡನೇ ಅಲೆ ಮತ್ತು ರೂಪಾಂತರಿ ತಳಿಯ ಎಚ್ಚರಿಕೆ ಇದ್ರೂ ನಿರ್ಲಕ್ಷ್ಯ ವಹಿಸಲಾಯ್ತು. ಭಾರಿ ದೊಡ್ಡ ಮಟ್ಟದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಆಚರಣೆಗೆ ಅವಕಾಶ ನೀಡಲಾಯ್ತು. ರಾಜಕೀಯ ರ್ಯಾಲಿಗಳಿಗೆ ಅವಕಾಶ ನೀಡಲಾಯ್ತು ಅಂತ ಟೀಕಿಸಲಾಗಿದೆ.
ಲಸಿಕೆ ಅಭಿಯಾನದಲ್ಲೂ ನಿರ್ಲಕ್ಷ್ಯ ತೋರಿದ ಭಾರತ, ಅದ್ರಲ್ಲೂ ವಿಫಲವಾಯ್ತು. ಭಾರತದಲ್ಲಿ ಈವರೆಗೆ ತನ್ನ ಜನಸಂಖ್ಯೆಯ ಸಣ್ಣ ಪ್ರಮಾಣ ಜನರಿಗಷ್ಟೇ ಲಸಿಕೆ ಹಾಕಲಾಗಿದೆ. ಇಂಥಾ ಸಮಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಗಮನ ಕೊಡುವ ಬದಲು ಟ್ವಿಟ್ಟರ್ನಲ್ಲಿ ತನ್ನ ವಿರುದ್ಧ ಕೇಳಿ ಬರುತ್ತಿರೋ ಟೀಕೆಯನ್ನು ಹತ್ತಿಕ್ಕಲು ಸರ್ಕಾರ ಗಮನ ಕೊಡ್ತಾ ಇದೆ. The Institute for Health Metrics and Evaluation ಸಂಸ್ಥೆ ಭಾರತದಲ್ಲಿ ಆಗಸ್ಟ್ 1ರ ವೇಳೆಗೆ 10 ಲಕ್ಷ ಜನ ಸಾವನ್ನಪ್ಪುತ್ತಾರೆ ಅಂತ ಅಂದಾಜು ಮಾಡಿದೆ. ಅದು ನಿಜವೇ ಆದರೆ ಅದಕ್ಕೆ ಮೋದಿ ಸರ್ಕಾರವೇ ನೇರ ಹೊಣೆ ಅಂತ ಲ್ಯಾನ್ಸೆಟ್ ಸಂಪಾದಕೀಯದಲ್ಲಿ ಹೇಳಲಾಗಿದೆ.
ಭಾರತದಲ್ಲಿ ಕೊರೊನಾ ಹುಚ್ಚುಕುದುರೆಯ ಓಟ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಪ್ರತಿದಿನ ದೇಶದಲ್ಲಿ ಕೊರೊನಾ ಸ್ಫೋಟವಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 3,66,161 ಕೋವಿಡ್ ಕೇಸ್ ಗಳು ಪತ್ತೆಯಾಗಿವೆ. ಇದೇ ಅವಧಿಯಲ್ಲಿ 3,754 ಕೊರೊನಾ ಸೋಂಕಿತರು ಮೃತಪಟ್ಟಿದೆ.
ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 2,26,62,575 ಕ್ಕೆ ಏರಿಕೆಯಾಗಿದೆ. ಸೋಂಕಿಗೆ ಮೃತಪಟ್ಟವರ ಸಂಖ್ಯೆ 2,46,116 ಕ್ಕೆ ಏರಿಕೆಯಾಗಿದೆ. ಇನ್ನು ಕಳೆದ 24 ಗಂಟೆಯಲ್ಲಿ 3,53,818 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈವರೆಗೆ 1,86,71,222 ಜನರು ರೋಗದಿಂದ ಚೇತರಿಸಿಕೊಂಡಂತಾಗಿದೆ. ಸದ್ಯ ದೇಶದಲ್ಲಿ 37,45,116 ಸಕ್ರಿಯ ಪ್ರಕರಣಗಳಿವೆ.