ಮೋದಿ ಸಚಿವ ಸಂಪುಟ ಪುನಾರಚನೆ : ಯಾರಿಗೆ ಚಾನ್ಸ್.. ಯಾರಿಗೆ ಕೋಕ್..?
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಇಂದು ಸಚಿವ ಸಂಪುಟವನ್ನು ಪುನಾರಚಿಸಲಿದ್ದು, ಎಲ್ಲರ ಚಿತ್ತ ದೆಹಲಿಯತ್ತ ನೆಟ್ಟಿದೆ. ಮೂಲಗಳ ಪ್ರಕಾರ ಸಂಪುಟ ಪುನರಚನೆಯಲ್ಲಿ ರಾಜ್ಯದ ಇಬ್ಬರಿಗೆ ಸ್ಥಾನ ಸಿಗುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.
ರಾಜ್ಯದಿಂದ ಸಚಿವರಾಗಿದ್ದ ಸುರೇಶ್ ಅಂಗಡಿ ನಿಧನ ಹೊಂದಿ ತೆರವಾಗಿದ್ದ ಸ್ಥಾನದ ಜತೆಗೆ ಇನ್ನೊಂದು ಸ್ಥಾನ ಸಿಗಲಿದೆ. ಕರ್ನಾಟಕದ 25 ಸಂಸದರಿದ್ದು, ಪ್ರಹ್ಲಾದ್ ಜೋಷಿ ಮತ್ತು ಸದಾನಂದ ಗೌಡ ಸಚಿವರಾಗಿದ್ದಾರೆ. ಸುರೇಶ್ ಅಂಗಡಿ ನಿಧನದಿಂದ ಖಾಲಿಯಾಗಿರುವ ಸ್ಥಾನವನ್ನು ರಾಜ್ಯದ ಸಂಸದರಿಗೆ ನೀಡುತ್ತಾರೆ ಎಂಬ ವಿಶ್ವಾಸವಿದೆ. ಸದ್ಯ ಹಾಲಿ ಇರುವ ಸಚಿವರಲ್ಲಿ ಒಬ್ಬರನ್ನು ಕೈ ಬಿಡುವ ಸಾಧ್ಯತೆಗಳಿವೆ.
ಇನ್ನು ಸಂಭಾವ್ಯರು ಯಾರ್ ಯಾರು ಅಂತ ನೋಡೋದಾದ್ರೆ, ಬಿ.ವೈ. ರಾಘವೇಂದ್ರ, ಶಿವಕುಮಾರ ಉದಾಸಿ, ಭಗವಂತ ಖೂಬಾ, ಎ. ನಾರಾಯಣಸ್ವಾಮಿ, ರಮೇಶ್ ಜಿಗಜಿಣಗಿ , ಉಮೇಶ್ ಜಾಧವ್ , ಶೋಭಾ ಕರಂದ್ಲಾಜೆ, ಪ್ರತಾಪ್‍ಸಿಂಹ ಇವರ ಹೆಸರು ಕೇಳಿಬರುತ್ತಿದೆ.
ಮುಂದಿನ ಚುನಾವಣೆಗೆ ತಂತ್ರ
ಮುಂದಿನ ವರ್ಷ ಉತ್ತರ ಪ್ರದೇಶ, ಉತ್ತರಾಖಂಡ, ಗುಜರಾತ್, ಗೋವಾ, ಮಣಿಪುರ, ಪಂಜಾಬ್ ಮತ್ತು ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ರಾಜ್ಯಗಳಿಗೆ ಆದ್ಯತೆ ನೀಡುವ ಸಾಧ್ಯತೆಗಳಿವೆ.
ಸಂಪುಟ ಪುನರಚನೆ ಬಳಿಕ ಬುಧವಾರ ಸಂಜೆ 5.30ರಿಂದ 6ರ ನಡುವೆ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ.









