2022 ರಲ್ಲಿ ಮೊದಲ ವಿದೇಶಿ ಪ್ರವಾಸ ನಡೆಸಲಿರುವ ಪ್ರಧಾನಿ – ಜರ್ಮನಿ, ಡೆನ್ಮಾರ್ಕ್ ಮತ್ತು ಫ್ರಾನ್ಸ್‌ಗೆ ಬೇಟಿ
ಪ್ರಧಾನಿ ನರೇಂದ್ರ ಮೋದಿ ಅವರು ಮೇ 2 ರಿಂದ 4 ರವರೆಗೆ ಜರ್ಮನಿ, ಡೆನ್ಮಾರ್ಕ್ ಮತ್ತು ಫ್ರಾನ್ಸ್‌ಗೆ ಅಧಿಕೃತ ಭೇಟಿ ನೀಡಲಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ಇದು ಈ ವರ್ಷದ ಪ್ರಧಾನಿಯವರ ಮೊದಲ ವಿದೇಶಿ ಭೇಟಿಯಾಗಿದೆ. ಈ ವೇಳೆ ಪ್ರಧಾನಿ ಮೋದಿ ಅವರು ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್, ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಮತ್ತು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಭೇಟಿಯಾಗಲಿದ್ದಾರೆ.
ಈ ವಿದೇಶಿ ಪ್ರವಾಸದಲ್ಲಿ ಪ್ರಧಾನಿ ಮೋದಿ ಅವರು ಮೂರು ದೇಶಗಳ ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ಕಾರ್ಯತಂತ್ರದ ಪಾಲುದಾರಿಕೆ ಮತ್ತು ಜಾಗತಿಕ ವಿಷಯಗಳ ಕುರಿತು ಮಾತನಾಡಲಿದ್ದಾರೆ. ಈ ಭೇಟಿಯಲ್ಲಿ ಈ 3 ದೇಶಗಳಲ್ಲದೆ ಇತರ 4 ರಾಷ್ಟ್ರಗಳ ಮುಖ್ಯಸ್ಥರನ್ನೂ ಪ್ರಧಾನಿ ಭೇಟಿ ಮಾಡಲಿದ್ದಾರೆ. 2021ರ ಸೆಪ್ಟೆಂಬರ್‌ನಲ್ಲಿ ಕ್ವಾಡ್ ಕಂಟ್ರಿ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಅಮೆರಿಕಕ್ಕೆ ತರಳಿದ್ದು ಪ್ರಧಾನಿಯವರ ಕೊನೆಯ ವಿದೇಶಿ ಭೇಟಿಯಾಗಿತ್ತು.
ಪ್ರಧಾನಿ ಮೋದಿ ಅವರು ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರೊಂದಿಗೆ ಬರ್ಲಿನ್‌ನಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಭಾರತ-ಜರ್ಮನಿ ಅಂತರ ಸರ್ಕಾರಿ ಸಮಾಲೋಚನೆಗಳ (ಐಜಿಸಿ) ಆರನೇ ಸಮಾರಂಭದಲ್ಲಿ ಉಭಯ ನಾಯಕರು ಭಾಗವಹಿಸಲಿದ್ದಾರೆ. ಐಜಿಸಿಯು ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ದ್ವಿಪಕ್ಷೀಯ ಸಂವಾದ ಸ್ವರೂಪವಾಗಿದ್ದು, ಇದರಲ್ಲಿ ಎರಡೂ ದೇಶಗಳ ಮಂತ್ರಿಗಳೂ ಭಾಗವಹಿಸುತ್ತಾರೆ. ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರೊಂದಿಗೆ ಪ್ರಧಾನಿ ಮೋದಿಯವರ ಮೊದಲ ಐಜಿಸಿ ಸಭೆ ಇದಾಗಿದೆ.
ಈ ಸಮಯದಲ್ಲಿ, ಪ್ರಧಾನ ಮಂತ್ರಿ ಮತ್ತು ಚಾನ್ಸೆಲರ್ ಸ್ಕೋಲ್ಜ್ ಜಂಟಿ ವ್ಯಾಪಾರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜರ್ಮನಿಯಲ್ಲಿರುವ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಸಹ ಮಾತನಾಡಲಿದ್ದಾರೆ. 2021 ರಲ್ಲಿ, ಭಾರತ ಮತ್ತು ಜರ್ಮನಿ 70 ವರ್ಷಗಳ ರಾಜತಾಂತ್ರಿಕ ಸಂಬಂಧವನ್ನು ಪೂರ್ಣಗೊಳಿಸಿದವು. 2000 ರಿಂದ ಎರಡೂ ದೇಶಗಳು ಪರಸ್ಪರರ ಕಾರ್ಯತಂತ್ರದ ಪಾಲುದಾರರಾಗಿದ್ದಾರೆ. ಈ ಭೇಟಿಯ ವೇಳೆ ಉಭಯ ದೇಶಗಳ ನಡುವೆ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಮಾತುಕತೆ ನಡೆಯಲಿದೆ.








