ಹೆಚ್.ಡಿ.ದೇವೇಗೌಡರಿಗೆ ಹುಟ್ಟು ಹಬ್ಬದ ಸಂಭ್ರಮ, ಶುಭ ಕೋರಿದ ಪ್ರಧಾನಿ ಮೋದಿ….
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಮೇ 18 ರಂದು ಹೊಳೆನರಸಿಪುರ ತಾಲೂಕಿನ ಹರದನಹಳ್ಳಿಯಲ್ಲಿ ಜನಿಸಿದ ದೇವೇಗೌಡ 89ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ.
ಮಾಜಿ ಪ್ರಧಾನಿ ಹುಟ್ಟು ಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಶುಭಕೋರಿದ್ದಾರೆ. ‘ನಮ್ಮ ಮಾಜಿ ಪ್ರಧಾನಿ ಮತ್ತು ಗೌರವಾನ್ವಿತ ಮುತ್ಸದ್ಧಿ ಶ್ರೀ ಹೆಚ್.ಡಿ.ದೇವೇಗೌಡ ಜೀ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮಗೆ ದೇವರು ಸುದೀರ್ಘ ಮತ್ತು ಉತ್ತಮ ಆರೋಗ್ಯ ನೀಡಲಿ’ ಎಂದು ಆಶಿಸಿದ್ದಾರೆ.
ಹೆಚ್ ಡಿ ಕುಮಾರಸ್ವಾಮಿ ಟ್ವೀಟ್ ಮಾಡಿ, ಭಾರತದ ಮಾಜಿ ಪ್ರಧಾನಮಂತ್ರಿಗಳು, ಮಣ್ಣಿನಮಗ, ನನ್ನ ಪೂಜ್ಯ ತಂದೆಯವರಾದ ಶ್ರೀ ಹೆಚ್.ಡಿ.ದೇವೇಗೌಡರಿಗೆ ಜನ್ಮದಿನದ ಶುಭಾಶಯಗಳು ಹಾಗೂ ನನ್ನ ಗೌರವಪೂರ್ವಕ ಪ್ರಣಾಮಗಳು.
ಅಲ್ಪಕಾಲವಷ್ಟೇ ಅಧಿಕಾರದಲ್ಲಿದ್ದರೂ ಕರ್ನಾಟಕ ಮತ್ತು ಭಾರತಕ್ಕೆ ಆವಿಸ್ಮರಣೀಯ ಕೊಡುಗೆ ನೀಡಿದವರು ಇವರು. ಕಾಯಾ ವಾಚಾ, ಮನಸಾ ಜನರ ಉದ್ಧಾರಕ್ಕಾಗಿ ಶ್ರಮಿಸಿದ ಅವರು ಭಾರತದ ರಾಜಕೀಯ ಕರ್ಮಯೋಗಿ. ತೊಂಬತ್ತರ ಹರೆಯದಲ್ಲೂ ಜನರಪರ ಹೋರಾಟ ನಡೆಸುತ್ತಿರುವ ಧಣಿವರಿಯದ ಕಾಯಕಯೋಗಿ. ಸದಾ ನನ್ನ ಕೈಹಿಡಿದು ಮುನ್ನಡೆಸಿದ ಅವರು ನನ್ನ ಪಾಲಿಗೆ ತಂದೆಯಷ್ಟೇ ಅಲ್ಲ; ಗುರು, ದೈವ, ಶಕ್ತಿಯೂ ಹೌದು. ನನಗಷ್ಟೇ ಅಲ್ಲ, ಈ ನಾಡಿಗೆ, ದೇಶಕ್ಕೆ ಇನ್ನಷ್ಟು ದೀರ್ಘಕಾಲ ಅವರ ಸೇವೆ-ಮಾರ್ಗದರ್ಶನ ಅಗತ್ಯವಿದೆ. ಆ ಭಗವಂತ ಅವರಿಗೆ ಉತ್ತಮ ಆಯುರಾರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ಸಿವಿಲ್ ಎಂಜಿನಿಯರಿಂಗ್‍ನಲ್ಲಿ ಡಿಪ್ಲೊಮಾ ಪದವೀಧರರಾಗಿರುವ ಎಚ್.ಡಿ ದೇವೇಗೌಡರು ಭಾರತದ 12ನೇ ಪ್ರಧಾನ ಮಂತ್ರಿಯಾಗಿದ್ದವರು. ದೇವೇಗೌಡರು ಮೇ 30ರ 1997ರಂದು ದೇಶದ 11ನೇ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.








