ವ್ಲಾಡಿಮಿರ್ ಪುಟಿನ್ ಜೊತೆ ದೂರವಾಣಿ ಮೂಲಕ ಮಾತನಾಡಿದ ಮೋದಿ…
ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ರಾತ್ರಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಉಕ್ರೇನ್ಗೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಪುಟಿನ್, ಪ್ರಧಾನಿ ಮೋದಿಗೆ ವಿವರಿಸಿದ್ದಾರೆ.
ರಷ್ಯಾ ಮತ್ತು ನ್ಯಾಟೋ ಗುಂಪಿನ ನಡುವಿನ ಭಿನ್ನಾಭಿಪ್ರಾಯಗಳನ್ನು ಪ್ರಾಮಾಣಿಕ ಸಂವಾದದ ಮೂಲಕ ಮಾತ್ರ ಪರಿಹರಿಸಬಹುದು ಎಂಬ ತಮ್ಮ ದೀರ್ಘಕಾಲದ ನಂಬಿಕೆಯನ್ನು ಪ್ರಧಾನಿ ಪುನರುಚ್ಚರಿಸಿದ್ದಾರೆ ಎಂದು ಪ್ರಧಾನ ಮಂತ್ರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸುವಂತೆ ಪ್ರಧಾನಿ ಮನವಿ ಮಾಡಿದ್ದಾರೆ. ರಾಜತಾಂತ್ರಿಕ ಮಾತುಕತೆ ಮತ್ತು ಸಂವಾದದ ಹಾದಿಗೆ ಮರಳಲು ಎಲ್ಲಾ ಕಡೆಯಿಂದ ಸಂಘಟಿತ ಪ್ರಯತ್ನ ನಡೆಸುವಂತೆ ಕರೆ ನೀಡಿದರು.
ಪ್ರಧಾನಿ ಮೋದಿ ಅವರು ಉಕ್ರೇನ್ನಲ್ಲಿರುವ ಭಾರತೀಯ ನಾಗರಿಕರ, ವಿಶೇಷವಾಗಿ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಭಾರತದ ಕಳವಳಗಳ ಬಗ್ಗೆ ರಷ್ಯಾದ ಅಧ್ಯಕ್ಷರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ನಾಗರಿಕರ ಸುರಕ್ಷಿತ ನಿರ್ಗಮನಕ್ಕೆ ಭಾರತವು ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ ಎಂದು ತಿಳಿಸಿದರು.
ತಮ್ಮ ಅಧಿಕಾರಿಗಳು ಮತ್ತು ರಾಜತಾಂತ್ರಿಕ ತಂಡಗಳು ನಿಯಮಿತ ಸಂಪರ್ಕಗಳನ್ನು ಮುಂದುವರಿಸುವುದನ್ನು ನಾಯಕರು ಒಪ್ಪಿಕೊಂಡರು. PM Narendra Modi speaks to Russian President Vladimir Putin








