ನವದೆಹಲಿ: ಮಹಾಮಾರಿ ಕೊರೊನಾ ಸೋಂಕು ಪ್ರಕರಣಗಳು ದೇಶದಲ್ಲಿ ಹೆಚ್ಚಾಗುತ್ತಿದ್ದು, ಕೇಂದ್ರ ಸರ್ಕಾರ ಸೋಂಕು ತಡೆಯಲು ಹಲವು ರೀತಿಯ ಕ್ರಮಗಳನ್ನು ಅನುಸರಿಸುತ್ತಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ, ಕೊರೊನಾ ವಿರುದ್ಧ ಯುದ್ಧ ಸಾರಲು ಸಾರ್ಕ್ ರಾಷ್ಟ್ರಗಳ ಪ್ರಮುಖ ನಾಯಕರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದರು.
ಮೊದಲಿಗೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಪ್ರಧಾನಿ, ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದ್ರು. ವಿಶೇಷವಾಗಿ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ನೇಪಾಳದ ಪ್ರಧಾನಿ ಕೆಪಿ ಶರ್ಮಾ ಒಲಿಗೆ ಧನ್ಯವಾದಗಳನ್ನ ತಿಳಿಸಿದ್ರು. ನೀವು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಅಂತಾ ಪ್ರಾರ್ಥಿಸುತ್ತೇನೆ ಎಂದು ಮೋದಿ ಹೇಳಿದರು.
ಬಳಿಕ ಕೊರೊನಾ ಬಗ್ಗೆ ಮಾತನಾಡಿದ ಅವರು, ಭಾರತ ಕೊರೊನಾ ಸೋಂಕು ಎದುರಿಸಲು ಕೈಗೊಂಡಿರುವ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ಅಲ್ಲದೆ ಕೊರೊನಾ ಎದುರಿಸಲು ಭಾರತ ಸಿದ್ಧವಿದೆ. ಯಾರೂ ಆತಂಕಪಡುವ ಅಗತ್ಯ ಇಲ್ಲ. ಎಲ್ಲಾ ದೇಶಗಳು ಕೊರೊನಾ ವಿರುದ್ಧದ ಹೋರಾಟವನ್ನ ಸವಾಲಾಗಿ ಸ್ವೀಕರಿಸೋಣ. ಸಾರ್ಕ್ ರಾಷ್ಟ್ರಗಳ ಸಂಬಂಧ ಹಲವು ವರ್ಷಗಳಿಂದ ತುಂಬಾ ಗಟ್ಟಿಯಾಗಿದೆ. ಈ ಸಾಂಕ್ರಮಿಕ ರೋಗದ ವಿರುದ್ಧ ಎಲ್ಲರೂ ಒಟ್ಟಿಗೆ ಹೋರಾಡಿ ಯಶಸ್ವಿಯಾಗೋಣ ಎಂದು ಕರೆ ನೀಡಿದ್ರು. ಇನ್ನು ದೇಶದಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಸಾಕಷ್ಟು ಕ್ರಮಗಳನ್ನ ಕೈಗೊಳ್ಳಲಾಗಿದೆ. ಹಂತ ಹಂತವಾಗಿ ಅದರ ಬಗ್ಗೆ ಜಾಗೃತಿಕೂಡ ನಡೆಸುತ್ತಿದ್ದೇವೆ. ಜನರ ಆತಂಕವನ್ನ ದೂರ ಮಾಡುವ ನಿಟ್ಟಿನಲ್ಲಿ ದೇಶದಲ್ಲಿ ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿದ್ದೇವೆ ಎಂದರು.