ಮಕ್ಕಳ ಅಶ್ಲೀಲ ವಿಡಿಯೋ ಡೌನ್ ಲೋಡ್, ಸಂಗ್ರಹ ಮತ್ತು ವೀಕ್ಷಣೆ ಮಾಡುವುದು ಪೊಕ್ಸೋ ಕಾಯ್ದೆಯಡಿ ಅಪರಾಧ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಹಿಂದೆ ಮಕ್ಕಳ ಅಶ್ಲೀಲ ಚಿತ್ರಗಳ ಡೌನ್ ಲೋಡ್ ಮತ್ತು ವೀಕ್ಷಣೆ ಮಾಡುವುದು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಅಪರಾಧವಲ್ಲ ಎಂದು ಮದ್ರಾಸ್ ಹೈಕೋರ್ಟ್ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮೊಬೈಲ್ ಸೇರಿದಂತೆ ಇನ್ನಿತರ ಸಾಧನದಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳನ್ನು ಸಂಗ್ರಹ ಮಾಡಿಟ್ಟುಕೊಳ್ಳುವುದೂ ಕೂಡಾ ಪೊಕ್ಸೋ ಕಾಯ್ದೆಯಡಿ ಅಪರಾಧವೇ ಎಂದು ಸ್ಪಷ್ಟಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾ.ಜೆ.ಪಿ.ಪರ್ದಿವಾಲ ಅವರಿದ್ದ ಪೀಠ ಈ ಆದೇಶ ನೀಡಿದೆ. ಅಲ್ಲದೇ, ಮಕ್ಕಳ ಅಶ್ಲೀಲ ಚಿತ್ರ ಎಂಬ ಪದವನ್ನು ‘ಮಕ್ಕಳ ಲೈಂಗಿಕ ಶೋಷಣೆ’ ಎಂಬುದಾಗಿ ಬದಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಎಲ್ಲ ನ್ಯಾಯಾಲಯಗಳಲ್ಲೂ ಮಕ್ಕಳ ಅಶ್ಲೀಲ ಚಿತ್ರ ಎಂಬ ಪದವನ್ನು ತಮ್ಮ ನ್ಯಾಯಾಲಯದ ಅದೇಶಗಳಲ್ಲೂ ಬಳಕೆ ಮಾಡದಂತೆ ನಿರ್ದೇಶನ ನೀಡಿದೆ.








