ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ವಿಷಯುಕ್ತ ಪತ್ರ?
ವಾಷಿಂಗ್ಟನ್, ಸೆಪ್ಟೆಂಬರ್20: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಉದ್ದೇಶಿಸಿ ಬರೆದ ಪತ್ರವು ರಿಸಿನ್ ವಿಷದಿಂದ ಕೂಡಿದೆ ಎಂದು ವರದಿಯಾಗಿದೆ. ಆದಾಗ್ಯೂ, ಹಲವಾರು ಮಾಧ್ಯಮ ವರದಿಗಳ ಪ್ರಕಾರ, ಪ್ಯಾಕೇಜ್ ಅನ್ನು ಶ್ವೇತಭವನಕ್ಕೆ ತಲುಪುವ ಮೊದಲು ಸರ್ಕಾರಿ ಮೇಲ್ ಕೇಂದ್ರದಲ್ಲಿ ತಡೆಹಿಡಿಯಲಾಗಿದೆ.
ಪತ್ರವು ಯುಎಸ್ ಅಧಿಕಾರಿಗಳು ತಡೆದಿದ್ದಾರೆ ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೋಲಿಸ್ (ಆರ್‌ಸಿಎಂಪಿ) ಸೆಪ್ಟೆಂಬರ್ 19 ರಂದು ವರದಿಯೊಂದರಲ್ಲಿ ತಿಳಿಸಿದ್ದಾರೆ.
ಆರ್‌ಸಿಎಂಪಿ ವಕ್ತಾರರು, ಶ್ವೇತಭವನಕ್ಕೆ ಕಳುಹಿಸಿದ ಅನುಮಾನಾಸ್ಪದ ಪತ್ರಕ್ಕೆ ಸಂಬಂಧಿಸಿದಂತೆ ಎಫ್‌ಬಿಐನಿಂದ ಸಹಾಯಕ್ಕಾಗಿ ವಿನಂತಿಯನ್ನು ಸ್ವೀಕರಿಸಲಾಗಿದೆ ಎಂದು ದೃಢ ಪಡಿಸಿದರು. ಆರ್‌ಸಿಎಂಪಿ, ಲಕೋಟೆಯಲ್ಲಿ ಕಂಡುಬರುವ ವಸ್ತುವಿನ ಬಗ್ಗೆ ವಿಶ್ಲೇಷಣೆ ನಡೆಸಿದ್ದು, ಈ ವರದಿಯು ರಿಸಿನ್ ಎಂಬ ವಿಷಕಾರಿ ವಸ್ತು ಇರುವಿಕೆಯನ್ನು ಸೂಚಿಸುತ್ತದೆ ಎಂದು ತಿಳಿಸಿದೆ. ಆದರೆ ಹೆಚ್ಚಿನ ವಿವರಗಳನ್ನು ಚರ್ಚಿಸಲು ನಿರಾಕರಿಸಿದೆ.
ಡೊನಾಲ್ಡ್ ಟ್ರಂಪ್ ಹೆಸರಿಗೆ ಬಂದ ಅನುಮಾನಾಸ್ಪದ ಪತ್ರವನ್ನು ತಡೆದ ನಂತರ, ಈ ಬಗ್ಗೆ ತನಿಖೆ ನಡೆಸಲು ತನಿಖಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವರದಿಗಳ ಪ್ರಕಾರ, ಯುಎಸ್ ಅಂಚೆ ತಪಾಸಣೆ ಸೇವೆಯೊಂದಿಗೆ ಎಫ್ಬಿಐ ಮತ್ತು ಯುಎಸ್ ಸೀಕ್ರೆಟ್ ಸರ್ವಿಸ್ ಈ ಬಗ್ಗೆ ಪರಿಶೀಲಿಸುತ್ತಿವೆ. ಡೊನಾಲ್ಡ್ ಟ್ರಂಪ್ ಅವರನ್ನು ಉದ್ದೇಶಿಸಿ ರಿಸಿನ್ ಹೊಂದಿರುವ ಪತ್ರವನ್ನು ಕೆನಡಾದಿಂದ ಕಳುಹಿಸಲಾಗಿರುವ ಸಾಧ್ಯತೆಯನ್ನು ತನಿಖಾ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಪತ್ರದ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಕೆನಡಾದ ಕಾನೂನು ಜಾರಿ ಅಧಿಕಾರಿಗಳು ತಮ್ಮ ಯುಎಸ್ ಸಹವರ್ತಿಗಳ ಸಹಯೋಗದೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ರಿಸಿನ್ ಎಂದರೇನು?
ಕ್ಯಾಸ್ಟರ್ ಆಯಿಲ್ ಪ್ಲಾಂಟ್ ಬೀಜಗಳು / ಕ್ಯಾಸ್ಟರ್ ಬೀನ್ಸ್‌ನಲ್ಲಿ ಹೆಚ್ಚು ಪ್ರಬಲವಾದ ಜೀವಾಣು ಉತ್ಪತ್ತಿಯಾಗುತ್ತದೆ. ಇದನ್ನು ರಿಸಿನ್ ಎಂದು ಕರೆಯಲಾಗುತ್ತದೆ. ಈ ವಿಷಕಾರಿ ವಸ್ತುವನ್ನು ಸುಲಭವಾಗಿ ತಯಾರಿಸಬಹುದಾದರಿಂದ ಇದನ್ನು ಭಯೋತ್ಪಾದಕರು ಬಹಳ ಹಿಂದಿನಿಂದಲೂ ದಾಳಿಗೆ ಬಳಸುತ್ತಿದ್ದಾರೆ. ರಿಸಿನ್ ಹೆಚ್ಚು ವಿಷಕಾರಿಯಾಗಿದೆ. ಅದು ಕಣ್ಣುಗಳೊಂದಿಗೆ ಸಂಪರ್ಕಕ್ಕೆ ಬಂದರೆ ಅಥವಾ ಹಾನಿಗೊಳಗಾದ ಚರ್ಮದ ಮೂಲಕ ಹೀರಲ್ಪಟ್ಟರೆ ಮಾನವ ದೇಹದ ಮೇಲೆ ಪರಿಣಾಮ ಬೀರುತ್ತದೆ. ಇದು ಉಸಿರಾಡುವಾಗ, ಚುಚ್ಚುಮದ್ದಿನ ಸಂದರ್ಭದಲ್ಲಿ ಅಥವಾ ಸೇವಿಸಿದಾಗ ಅಪಾಯಕಾರಿ ಎಂದು ಸಾಬೀತಾಗಿದೆ. ಈ ವಿಷವನ್ನು ಸೇವಿಸುವುದರಿಂದ ವಾಕರಿಕೆ, ವಾಂತಿ, ಅತಿಸಾರ ಮತ್ತು ನೋವು, ಉರಿಯೂತ ಮತ್ತು ರಕ್ತಸ್ರಾವದಂತಹ ಲಕ್ಷಣಗಳು ಕಂಡುಬರುತ್ತವೆ. ಇದು ಹೊಟ್ಟೆ ಮತ್ತು ಕರುಳಿನಲ್ಲಿ ಆಂತರಿಕ ರಕ್ತಸ್ರಾವಕ್ಕೆ ಕಾರಣವಾಗಬಹುದು ಮತ್ತು ಪಿತ್ತಜನಕಾಂಗ, ಗುಲ್ಮ, ಮೂತ್ರಪಿಂಡಗಳ ಅಂಗಾಂಗ ವೈಫಲ್ಯಕ್ಕೆ ಕಾರಣವಾಗಬಹುದು. ಇದರಿಂದ ರಕ್ತಪರಿಚಲನಾ ವ್ಯವಸ್ಥೆಯ ಕುಸಿತ ಉಂಟಾಗಿ ಸಾವಿಗೆ ಕಾರಣವಾಗಬಹುದು.