ಹೊಸ ವರ್ಷ ಶುಭಾಶಯದ ನೆಪದಲ್ಲಿ ಶಿವಮೊಗ್ಗದ ಖ್ಯಾತ ವೈದ್ಯ ಹಾಗೂ ವಿಧಾನಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಅವರ ಹೆಸರಿನಲ್ಲಿ ವಿಷ ಮಿಶ್ರಿತ ಲಡ್ಡುಗಳನ್ನು ಕಳುಹಿಸಿರುವ ಘಟನೆ ಬೆಳಕಿಗೆ ಬಂದಿದೆ.
ಶಿವಮೊಗ್ಗದಲ್ಲಿ ನಡೆದ ಈ ವಿಚಿತ್ರ ಪ್ರಕರಣವು ಭಯಾನಕ ತಿರುವು ಪಡೆಯುವ ಸಾಧ್ಯತೆಯಿದ್ದು, ಪೊಲೀಸ್ ಇಲಾಖೆಯ ಸಕಾಲಿಕ ಎಚ್ಚರಿಕೆ ಅನಾಹುತವನ್ನು ತಡೆಯಲು ನೆರವಾಗಿದೆ.
ಬುಧವಾರ, ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್. ನಾಗರಾಜ್ ಹಾಗೂ ಅಜೀವ ಸದಸ್ಯ ಡಾ. ಎಸ್.ಟಿ. ಅರವಿಂದ್ ಸೇರಿದಂತೆ ವಿವಿಧ ಗಣ್ಯರು, ಡಿಟಿಡಿಸಿ ಕೊರಿಯರ್ ಮೂಲಕ ಡಾ. ಧನಂಜಯ ಸರ್ಜಿ ಅವರ ಹೆಸರಿನಲ್ಲಿ ಲಡ್ಡು ಹೊಂದಿರುವ ಬಾಕ್ಸ್‌ಗಳನ್ನು ಸ್ವೀಕರಿಸಿದರು. ಲಡ್ಡುಗಳ ಜೊತೆಗೆ ಹೊಸ ವರ್ಷದ ಶುಭಾಶಯ ಎಂಬ ಪತ್ರವೂ ಕಳುಹಿಸಲಾಗಿತ್ತು,
ಬಾಕ್ಸ್‌ಗಳನ್ನು ಸ್ವೀಕರಿಸಿದ ನಾಗರಾಜ್ ಅವರು, ಔಪಚಾರಿಕವಾಗಿ ಧನ್ಯವಾದ ಹೇಳಲು ಧನಂಜಯ ಸರ್ಜಿ ಅವರಿಗೆ ಕರೆ ಮಾಡಿದರು. ತಾವು ಯಾವುದೇ ರೀತಿಯ ಸಿಹಿತಿನಿಸು ಕಳುಹಿಸಿಲ್ಲ ಎಂದು ತಿಳಿಸಿದ ಸರ್ಜಿ, ತಕ್ಷಣವೇ ಆತಂಕಗೊಂಡು ತಮ್ಮ ಆಪ್ತ ಸಹಾಯಕರ ಮೂಲಕ ಬಾಕ್ಸ್‌ಗಳಲ್ಲಿ ಇದ್ದ ಲಡ್ಡುಗಳನ್ನು ಸೇವಿಸದಂತೆ ಎಚ್ಚರಿಸಿದರು.
ಈ ಘಟನೆಗೆ ಸಂಬಂಧಿಸಿದಂತೆ ಡಾ. ಸರ್ಜಿ ತಕ್ಷಣವೇ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಬಾಕ್ಸ್‌ಗಳಲ್ಲಿ ಇದ್ದ ಲಡ್ಡುಗಳು ಸ್ವಲ್ಪ ಕಹಿಯಾಗಿದ್ದವು, ಇದರಿಂದ ಅವುಗಳಲ್ಲಿ ಯಾವುದಾದರೂ ಮಿಶ್ರಣ ಮಾಡಿರಬಹುದು ಎಂಬ ಅನುಮಾನ ತೀವ್ರಗೊಂಡಿತು.
ಇಂತಹ ಕೃತ್ಯ ನಡೆಸಿದವರು ಯಾರಾಗಿರಬಹುದು ಎಂಬುದು ಇನ್ನೂ ಗೊತ್ತಾಗಿಲ್ಲ. ವಿಶೇಷವಾಗಿ, ಡಾ. ಧನಂಜಯ ಸರ್ಜಿ ಅವರ ಹೆಸರನ್ನು ದುರುಪಯೋಗ ಪಡಿಸುವ ಮೂಲಕ ವೈಷಮ್ಯ ಅಥವಾ ದ್ವೇಷಪೂರಿತ ಉದ್ದೇಶ ಈ ಕೃತ್ಯದ ಹಿಂದೆ ಇರಬಹುದೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಪೊಲೀಸರು ಲಡ್ಡುಗಳ ಮಾದರಿಗಳನ್ನು ಎಫ್‌ಎಸ್‌ಎಲ್ (ಫರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ) ಗೆ ಕಳುಹಿಸಿದ್ದಾರೆ. ಕೊರಿಯರ್ ಕಳುಹಿಸಿದವನ ಗುರುತು ಮತ್ತು ಉದ್ದೇಶವನ್ನು ಪತ್ತೆಹಚ್ಚಲು ಡಿಟಿಡಿಸಿ ಕೊರಿಯರ್ ಕಂಪನಿಯ ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಲಾಗಿದೆ. ಘಟನೆಯು ಶಂಕೆ ಮತ್ತು ಆತಂಕವನ್ನು ಹುಟ್ಟಿಸಿದೆ.








